ಬೆಂಗಳೂರು: ಬನಶಂಕರಿಯ ಬಿಎನ್‌ಎಂ ಕಾಲೇಜಿನಲ್ಲಿ ಬಿಬಿಎಂ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿಸುತ್ತಿದ್ದ ಪ್ರಾಂಶುಪಾಲ ಶ್ರೀನಿವಾಸ ರಾವ್ ಮಾನೆ ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲಸಚಿವ ಡಾ. ನಿಂಗೇಗೌಡ ಅವರಿಗೆ ಸಿಕ್ಕಿಬಿದ್ದಿದ್ದಾರರೆ. ಮಾನೆ ಅವರನ್ನು ಬಂಧಿಸಲಾಗಿದೆ . ಬಿಎನ್‌ಎಂ ಕಾಲೇಜಿನಲ್ಲಿ ಶುಕ್ರವಾರ 5 ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆ ಪ್ರಾರಂಭವಾಗಿನಂದ ಸಂಜೆಯವರೆಗೂ ವಿದ್ಯಾರ್ಥಿಗಳು ಪರೀಕ್ಷಾ ಪತ್ರಿಕೆಯಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ. ಕೇವಲ ನಾಮ್‌ಕೆವಾಸ್ತೆ ಪರೀಕ್ಷೆಗೆ ಹಾಜರಾಗಿದ್ದರು. ನಂತರ ಆ ಪುಸ್ತಕಗಳನ್ನು ಗಾಂಧಿ ಬಜಾರ್‌ನ 3ನೇ ಹಂತದಲ್ಲಿರುವ ಮನೆಯೊಂದಕ್ಕೆ ರವಾನಿಸಿ ಬೇರೆಯವರ ಕೈಯಲ್ಲಿ ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಬರೆಯಿಸಲಾಗಿತ್ತು.
ಈ ಬಗ್ಗೆ ಮೌಲ್ಯ ಮಾಪನ ಕುಲಸಚಿವರಿಗೆ ಸಂಜೆ 6.10 ನಿಮಿಷದ ವೇಳೆಗೆ ಮಾಹಿತಿ ದೊರೆತಿದೆ. ತನ್ನನ್ನು ವಿದ್ಯಾರ್ಥಿಯೆಂದು ಹೇಳಿದ ವ್ಯಕ್ತಿ ಅಕ್ರಮದ ಬಗ್ಗೆ ವಿವರ ನೀಡಿದ್ದಾನೆ. ತಕ್ಷಣವೇ, ವಿವಿಯ ಮೌಲ್ಯಮಾಪನ ಕುಲಸಚಿವರು ಸ್ಥಳಕಕೆ ಭೇಟಿ ನೀಡಿದಾಗ ಪ್ರಾಂಶುಪಾಲ ಮಾನೆ, ಉತ್ತರ ಬರೆಸುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಾಂಶುಪಾಲರು , ಸಿಬ್ಬಂದಿ ಹಾಗೂ ಏಳೆಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪ್ರಾಂಶುಪಾಲರಾಗಿದ್ದವರು ಈ ಹಿಂದೆ ಸಿಂಡಿಕೇಟ್ ಸದಸ್ಯರಾಗಿದ್ದರೆಂದು ತಿಳಿದು ಬಂದಿದೆ. ಈ ಸಂಬಂಧ ಕುಲಪತಿ ಡಾ.ಬಿ ತಿಮ್ಮೇಗೌಡ ಅವರೂ ಠಾಣೆಗೆ ಭೇಟಿ ನೀಡಿದ್ದರು.
ಮತ್ತೊಂದು ಪ್ರಕರಣ: ಸುರಾನಾ ಕಾಲೇಜಿನಲ್ಲಿ ಶೇ.75ರಷ್ಟು ಹಾಜರಿ ಇಲ್ಲದಿರುವ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆ ಕುರಿತು ವಿವಿ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 3 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ಆಧರಿಸಿ ತನಿಖೆ ನಡೆಯಲಿದೆ.