ಜಿಲ್ಲಾ ಸುದ್ದಿ

ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ?

Vishwanath S

ಬೆಂಗಳೂರು: ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಕೃಪಾಶೀರ್ವಾದ ನೀಡುವ ರಾಜ್ಯ ಸರ್ಕಾರದ ನೀತಿ ಕುರಿತು ಚರ್ಚೆ ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲೂ ಮುಂದುವರಿಯುವ ಸಾಧ್ಯತೆ ಇದೆ.

ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಇನ್ನೊಬ್ಬ ಹಿರಿಯ ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರು ಶಿಫಾರಸು ಮಾಡಿದ್ದ ಶಿಸ್ತು ಕ್ರಮವನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ಈ ವಿಚಾರ ನಮೂದಾಗಿದೆ.

ಬೆಂಗಳೂರು ನಗರ ಪೂರ್ವ ವಿಭಾಗದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದುರ್ನಡತೆ ತೋರಿದ್ದ ಆರೋಪ ಎದುರಿಸುತ್ತಿದ್ದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಬುಧವಾರ ಚರ್ಚೆ ನಡೆಯಲಿದೆ.

ಇದರ ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ವಲಯದ ಹಿರಿಯ ಉಪನಿರ್ದೇಶಕರಾಗಿದ್ದ ಎಸ್.ಕೆ ಚನ್ನಬಸಪ್ಪ ಅವರ ವಿರುದ್ಧ ಉಪ ಲೋಕಾಯುಕ್ತರು ಮಾಡಿದ್ದ ಶಿಸ್ತುಕ್ರಮದ ಶಿಫಾರಸನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ರು. 200 ದಿಂದ ರು. 5000 ವರೆಗೆ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜಗುರಿಸುವುದಕ್ಕೆ, ಸೇವೆಯಿಂದ ಅಮಾನತುಗೊಳಿಸುವುದಕ್ಕೆ ಮತ್ತು ನಿವೃತ್ಥಿ ಸೌಲಭ್ಯವನ್ನು ತಡೆ ಹಿಡಿಯುವುದಕ್ಕೆ ಈ ಹಿಂದೆ ನಡೆದ ಹಲವು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

SCROLL FOR NEXT