ಹೊಲಿಗೆ ಮಾಡುತ್ತಿರುವುದು 
ಜಿಲ್ಲಾ ಸುದ್ದಿ

ಎಚ್‌ಐವಿ ಬಳುವಳಿ, ಗೆದ್ದ ಬದುಕಿನ ಚಳವಳಿ

ಎಚ್‌ಐವಿ ಬಂತೆಂದರೆ ಸಾವೇ ಗತಿಯೆಂದು ಭಾವಿಸಿ ಕೊರಗುತ್ತ ಸಾವನ್ನು ಇನ್ನಷ್ಟು ಹತ್ತಿರಕ್ಕೆ ಬರಮಾಡಿಕೊಳ್ಳುವವರೇ...

ಬಳ್ಳಾರಿ: ಎಚ್‌ಐವಿ ಬಂತೆಂದರೆ ಸಾವೇ ಗತಿಯೆಂದು ಭಾವಿಸಿ ಕೊರಗುತ್ತ ಸಾವನ್ನು  ಇನ್ನಷ್ಟು ಹತ್ತಿರಕ್ಕೆ ಬರಮಾಡಿಕೊಳ್ಳುವವರೇ ಅಧಿಕ. ಇಲ್ಲೊಬ್ಬರು ದಿಟ್ಟ ಮಹಿಳೆ ಎಚ್‌ಐವಿ ಸೋಂಕನ್ನೇ ನಡುಗಿಸಿದ್ದಾರೆ. ತನ್ನ ಮೂರು ಮಕ್ಕಳನ್ನು ದಡ ಸೇರಿಸಬೇಕೆಂಬ ಛಲದಿಂದ ಮುನ್ನಡೆದು ಯಶಸ್ವಿಯೂ ಆಗಿದ್ದಾರೆ. ಈಗ ನಾಲ್ವರಿಗೆ ಉದ್ಯೋಗ ನೀಡಿ, ತಾನೂ  ಸುಖ ಜೀವನ ನಡೆಸುತ್ತ ಎಲ್ಲರಿಗೂ ಮಾದರಿಯಾಗಿದ್ದಾರೆ.
13ನೇ ವರ್ಷಕ್ಕೆ ಮದುವೆ, 18 ತುಂಬುವ ಹೊತ್ತಿಗೆ ಮೂರು ಮಕ್ಕಳ ತಾಯಿ, 20ಕ್ಕೆ ಪತಿಯಿಂದ ಬಳುವಳಿಯಾಗಿ ಬಂದ ಎಚ್‌ಐವಿ ಸೋಂಕು, ಮತ್ತೆರಡು ವರ್ಷದಲ್ಲಿ ಗಂಡನ ಸಾವು. ಇಷ್ಟೆಲ್ಲ ದುರಂತಗಳ ನಡುವೆಯೂ ಬಳ್ಳಾರಿಯ ಶೀಲಮ್ಮ (ಹೆಸರು ಬದಲಿಸಿದೆ) ಬದುಕಿನ ಭರವಸೆ ಕಳೆದುಕೊಳ್ಳಲಿಲ್ಲ. ತನ್ನದಲ್ಲದ ತಪ್ಪಿಗೆ ತಾನೇಕೆ ಶಿಕ್ಷೆ ಅನುಭವಿಸಬೇಕು?  ತನ್ನ ಮಕ್ಕಳ ಬದುಕು ಏಕೆ ಬೀದಿಗೆ ಬೀಳಬೇಕು ಎಂದು ಪ್ರಶ್ನಿಸಿಕೊಂಡರು. ಎಚ್‌ಐವಿ ಸೋಂಕಿನ ವಿರುದ್ಧ ಸೆಟೆದು ನಿಲ್ಲುವ ಸಂಕಲ್ಪ ಮಾಡಿದರು. ಹಾದಿ ಸುಲಭದ್ದಲ್ಲ ಎನ್ನುವುದು ಗೊತ್ತಿದ್ದರೂ ಎದೆಗುಂದದೇ ಧೈರ್ಯವನ್ನೇ ಅಸ್ತ್ರವಾಗಿಸಿಕೊಂಡು ಮುನ್ನುಗ್ಗಿದರು. ಅಕ್ಷರ ಬಾರದಿದ್ದರೇನಂತೆ? ಬಡತನ ಬೆನ್ನಿಗೆ ಅಂಟಿಕೊಂಡರೆ ಏನಂತೆ? ಹೊಲಿಗೆ ಕಲಿತು ಮಕ್ಕಳನ್ನು ಬೆಳೆಸತೊಡಗಿದರು.

ಕೆಲ ವರ್ಷ ಬೇರೆಯವರ ಕೈಕೆಳಗೆ ಬಟ್ಟೆ ಹೊಲಿದು ಮಕ್ಕಳನ್ನು ಓದಿಸಿದ ಶೀಲಮ್ಮ, ಆಮೇಲೆ ನಿತ್ಯ ಜೀವನ ಸಂಸ್ಥೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣಾ ಘಟಕದ ನೆರವಿನಿಂದ ಮಹಾನಗರ ಪಾಲಿಕೆಯ ಯೋಜನೆಯೊಂದರಲ್ಲಿ ಸಾಲ ಪಡೆದು, ಐದು ಹೊಲಿಗೆ ಯಂತ್ರ ಖರೀದಿಸಿದರು. ನಾಲ್ಕು ಜನರಿಗೆ ಕೆಲಸವನ್ನೂ ಕೊಟ್ಟರು. ಈಗ ಅವರಿಗೆ 33 ವರ್ಷ. ತಿಂಗಳಿಗೆ ರು.15 ರಿಂದ 20 ಸಾವಿರ ದುಡಿಯುತ್ತಿದ್ದಾರೆ. ಹಿರಿಯ ಮಗಳನ್ನು ಪ್ಯಾರಾ ಮೆಡಿಕಲ್  ಓದಿಸುತ್ತಿದ್ದಾರೆ. ಎರಡನೇ ಮಗ ಐಟಿಐ ಮಾಡಿದ್ದು, ಡಿಪ್ಲೊಮಾ ಓದಿಸಲು  ನಿರ್ಧರಿಸಿದ್ದಾರೆ. ಕಿರಿಯ ಮಗಳು ಈ ಬಾರಿ ಎಸ್ಸೆಸ್ಸೆಲ್ಸಿ. ಸಮಾಜದ ಚುಚ್ಚುಮಾತುಗಳಿಗೆ ಕಿವಿಗೊಡದೆ, ಸುಂದರ ಸಂಸಾರ ಸಾಗಿಸುತ್ತಿದ್ದಾರೆ. ಮಕ್ಕಳನ್ನು ದಡ ಸೇರಿಸುವುದೇ ತನ್ನ ಉದ್ದೇಶ ಎನ್ನುತ್ತಾರೆ ಶೀಲಮ್ಮ.

ಎಚ್‌ಐವಿಯೊಂದಿಗೆ  ಜೀವನ ನಡೆಸುವಂಥವರು ಯಾವುದೇ ಕಾರಣಕ್ಕೂ ಭಯಪಡದೆ, ಅಧೀರರಾಗದೆ  ಸರ್ಕಾರದಲ್ಲಿರುವ ಹಲವು ಯೋಜನೆಗಳ ಸೌಲಭ್ಯಗಳನ್ನು ಪಡೆಯುವ ಮೂಲಕ ಜೀವನವನ್ನು ಉತ್ತಮ ಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇದಕ್ಕೆ ಶೀಲಮ್ಮರ ಸಾಧನೆಯೇ ಮಾದರಿ ಆಗಿದೆ.

-ಡಾ.ಸಿ. ನರಸಿಂಹಮೂರ್ತಿ
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ


ಶಶಿಧರ ಮೇಟಿ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT