ಬೆಂಗಳೂರು: ಪಕ್ಷದ ಸಂಘಟನೆಗೆ ವಿಶೇಷ ಕಾರ್ಯತಂತ್ರ ಮತ್ತು ರಾಜಕೀಯವಾಗಿ ಇನ್ನಷ್ಟು ವಿಸ್ತಾರಗೊಳ್ಳಲು ಮಹತ್ವದ ರಣತಂತ್ರ ರೂಪಿಸುವ ಜತೆಗೆ, ಕಾಂಗ್ರೆಸ್‍ನ ಮಿಥ್ಯಾರೋಪ ಭೇದಿಸುವ `ಸತ್ಯಾರೂಪ' ಬಹಿರಂಗಪಡಿಸುವ ನಿರ್ಧಾರದೊಂದಿಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ರಾಷ್ಟ್ರಾದ್ಯಂತ ಪಕ್ಷ ಸಂಘಟನೆಗೆ ಗ್ರಾಮಮಟ್ಟದಲ್ಲಿ ಬಲವರ್ಧನೆಗೆ ದಿಟ್ಟಹೆಜ್ಜೆ ಇರಿಸುವ ಜತೆಗೆ, ಭೂಸ್ವಾಧೀನ ಕಾಯಿದೆಯ ಬಗ್ಗೆ ಕಾಂಗ್ರೆಸ್ ಹರಡಿರುವ ಸುಳ್ಳು ಸಂಗತಿಗಳನ್ನು ರೈತರಿಗೆ ನೇರವಾಗಿ ವಿವರ ನೀಡಿ ನಿವಾರಿಸಲು ಗ್ರಾಮಮಟ್ಟದಲ್ಲಿ ಸಭೆ ನಡೆಸುವ ಸ್ಪಷ್ಟ ನಿರ್ದೇಶನವೂ ರವಾನೆಯಾಗಿದೆ. ಇಡೀ ಕಾರ್ಯಕಾರಿಣಿಯನ್ನು ಮುನ್ನೆಡೆಸಿದ ಮೋದಿ-ಶಾ ಜೋಡಿ, ತಮ್ಮ ಮುಂದಿನ ರಹದಾರಿಯನ್ನು ಸ್ಪಷ್ಟ ರೂಪವನ್ನು ವ್ಯಕ್ತಪಡಿಸಿ ಅದಕ್ಕೆ ಸರ್ವ ಸಮ್ಮತಿಯನ್ನೂ ಪಡೆದುಕೊಂಡಿತು. ಈ ಮೂಲಕ ಮೂರು ದಿನಗಳ ಕಾಲ ನಗರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಗೆ ಶುಕ್ರವಾರ ಮಧ್ಯಾಹ್ನ ತೆರೆಬಿದ್ದಿತು.
ಸದಸ್ಯತ್ವ ಅಭಿಯಾನಕ್ಕೆ ಮೆಚ್ಚುಗೆ
ರಾಷ್ಟ್ರಾದ್ಯಂತ ಯಶಸ್ವಿಯಾಗಿ ನಡೆದ ಸದಸ್ಯತ್ವ ಅಭಿಯಾನದ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದ್ದು, 10 ತಿಂಗಳ ಸರ್ಕಾರದ ಸಾಧನೆ ಬಗ್ಗೆಯೂ ಚರ್ಚೆಯಾಗಿದ್ದು, ಸರ್ಕಾರ ಕೈಗೊಂಡಿರುವ ಎಲ್ಲ ನಿರ್ಣಯ, ನಿರ್ಧಾರಗಳಿಗೂ ಪಕ್ಷ ಪ್ರಶಂಸೆ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಮೈತ್ರಿಯ ಬಗ್ಗೆಯೂ ಮೆಚ್ಚುಗೆ ಸಿಕ್ಕಿದೆ. ಅಲ್ಲದೆ, ಭೂಸ್ವಾ„ೀನ ಕಾಯಿದೆ ಅನುಷ್ಠಾನಕ್ಕೆ ಕೈಗೊಂಡಿರುವ ವಿಶೇಷ ಪ್ರಕ್ರಿಯೆಗಳನ್ನೂ ಪಕ್ಷ ಸ್ವಾಗತಿಸಿದೆ. ಒಕ್ಕೂಟದ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗೆ ಅತೀವ ಪ್ರಶಂಸೆ ವ್ಯಕ್ತವಾಗಿದ್ದು,
ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಶ್ಲಾಘನಾರ್ಹ ಎಂಬುದನ್ನು ಸಮಗ್ರ ಅಂಕಿ-ಅಂಶಗಳನ್ನು ಪರಿಶೀಲಿಸದ ನಂತರ ಕಾರ್ಯಕಾರಿಣಿ ಹರ್ಷ ವ್ಯಕ್ತಪಡಿಸಿದೆ.
ಅಶೋಕ ಹೋಟೇಲ್‍ನಲ್ಲಿ ನಡೆದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಮತ್ತು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಆರಂಭದಲ್ಲಿ ಪಕ್ಷದ ನಾಡಿಮಿಡಿತವನ್ನು ಹಿಡಿದ ಈ ಜೋಡಿ ಸಾವಧಾನವಾಗಿ ಎಲ್ಲವನ್ನೂ ಆಲಿಸಿತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ದಿಕ್ಸೂಚಿ ಭಾಷಣ, ಪ್ರಧಾನಿ ನರೇಂದ್ರ ಮೋದಿಯವರ ಸಮಾರೋಪ ಭಾಷಣ ಹೊರತಾಗಿ ಇಡೀ ಕಾರ್ಯಕಾರಿಣಿ ಸಂವಾದ ರೂಪದಲ್ಲೇ ನಡೆದಿದ್ದು ವಿಶೇಷ. ಇದಕ್ಕಿಂತ ಮುಖ್ಯವಾಗಿ ಈ ಜೋಡಿ ಈವರೆಗೆ ಮಾಡಿದ್ದೆಲ್ಲವನ್ನೂ ಅರಗಿಸಿಕೊಂಡವರಂತೆ ಪಕ್ಷದ ಎಲ್ಲಾ ತಲೆಮಾರಿನ ನಾಯಕರ ಮನಗೆದ್ದರು. ಮುಂದಿನ ದಿನಗಳಲ್ಲಿ ಇಡುವ ಹೆಜ್ಜೆಗಳಿಗೂ ಹಾರೈಕೆಗಳನ್ನೂ ಪಡೆದುಕೊಂಡರು.
ಮೊದಲು `ಅರಿತರು'
ಕೃಷಿ, ರೈತ, ನೀರಾವರಿ, ಸಬ್ಸಿಡಿ, ಮಹಿಳೆ, ಆರ್ಥಿಕ ವ್ಯವಸ್ಥೆ, ಆಡಳಿತ ಯಂತ್ರ, ವಿದೇಶಾಂಗ ನೀತಿ ಹೀಗೆ ಪ್ರತಿಯೊಂದನ್ನು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅರಿತುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಎಲ್ಲವನ್ನೂ ದಾಖಲಿಸಿಕೊಂಡರು. ಪ್ರತಿ ರಾಜ್ಯದ ಪ್ರಮುಖ ಸಮಸ್ಯೆ ಸವಾಲುಗಳನ್ನು ಆಯಾಯ ರಾಜ್ಯದ ಪಕ್ಷದ ಪ್ರತಿನಿಧಿಗಳಿಂದ ಪಡೆದುಕೊಳ್ಳುವ ಜೊತೆಗೆ ಸಮಸ್ಯೆಗಿರುವ ಪರಿಹಾರವನ್ನು ಕೇಳಿಕೊಂಡರು. ಅಷ್ಟೇ ಅಲ್ಲದೇ ಒಟ್ಟಾರೆ ಪಕ್ಷದೊಳಗಿನ ತಮ್ಮ ನೇತೃತ್ವದ ಬಗೆಗಿನ ಅಭಿಪ್ರಾಯವನ್ನು ಅರಿತರು.ಈ ಒಂದು ಬೆಳವಣಿಗೆಯನ್ನು ವಿಶ್ಲೇಷಿಸುವುದಾದರೆ ರಾಷ್ಟ್ರೀಯ ಪಕ್ಷದ ಕಾರ್ಯಕಾರಿಣಿಯೊಂದರಲ್ಲಿ ಇಡೀ ದೇಶದ ಪ್ರಮುಖ ಸಮಸ್ಯೆಗಳು ಬೆಳಕು ಚೆಲ್ಲಿತು.
ಸಂದೇಶ ಕೊಟ್ಟರು
ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿತರಲು ಹೊರಟ ಸರ್ಕಾರದ ಕ್ರಮವನ್ನು ಬಿಜೆಪಿ ಗಟ್ಟಿಯಾಗಿ ಸಮರ್ಥಿಸಿಕೊಂಡಿದೆ. ಅಲ್ಲದೇ ಈ ಕಾಯ್ದೆ ಕುರಿತಂತೆ ವ್ಯಾಪಕವಾಗಿ ಎದ್ದಿರುವ ಅಸಮಾಧಾನದ ಹೊಗೆಯನ್ನು ಹತ್ತಿಕ್ಕಲು ಮತ್ತು ಪಕ್ಷದ ಪದಾಧಿಕಾರಿಗಳಲ್ಲೇ ಇದ್ದ ಆತಂಕವನ್ನು ಕಾರ್ಯಕಾರಿಣಿ ದೂರ ಮಾಡಿದೆ.`ಕಾಂಗ್ರೆಸ್ ಭೂಸ್ವಾಧೀನ' ಕಾಯಿದೆಯಲ್ಲಿದ್ದದ್ದು ಏನು? ಈಗ ಸುಗ್ರೀವಾಜ್ಞೆ ಮೂಲಕ ಜಾರಿಯಾಗಿರುವ ಭೂಸ್ವಾಧೀನ ಕಾಯಿದೆಯಲ್ಲಿ ರುವುದು ಏನು? ಎರಡರ ನಡುವಿನ ವ್ಯತ್ಯಾಸ ಹಾಗೂ ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಪದಾಧಿಕಾರಿಗಳಿಗೆ ಮನದಟ್ಟು ಮಾಡಲಾ ಯಿತು. ಇದನ್ನೇ ರೈತರಿಗೂ ತಲುಪಿಸುವಂತೆ ಸೂಚಿಸಲಾಯಿತು. ಇಷ್ಟೇ ಅಲ್ಲದೇ ಜಮ್ಮು-ಕಾಶ್ಮೀರ ಸರ್ಕಾರ ರಚನೆಯ ಪಾಲುದಾರಿಕೆಯ ನಂತರ ನಡೆದ ಬೆಳವಣಿಗೆ ಬಗ್ಗೆ ಎದ್ದಿದ್ದ ಬೇಸರಕ್ಕೂ ಕಾರ್ಯಕಾರಿಣಿ ಸಮರ್ಥನೆ ನೀಡಿದ್ದು, ಏಕೆ ಸರ್ಕಾರ ರಚಿಸಬೇಕಾಯಿತು ಎಂದು ಮನದಟ್ಟುಮಾಡಿಕೊಡುವಲ್ಲಿ ಯಶಸ್ವಿಯಾದರು.
ತಾವೂ ದಾರಿಕಂಡುಕೊಂಡರು
ಪಕ್ಷ ಸಂಘಟನೆಗಾಗಿ ಸದಸ್ಯತ್ವ ಅಭಿಯಾನದ ಮುಂದುವರಿದ ಭಾಗವಾಗಿ ಮಹಾ ಸಂಪರ್ಕ ಅಭಿಯಾನವನ್ನು ರೂಪಿಸಿ ಸಮಯ ನಿಗದಿ ಮಾಡಲಾಗಿದೆ. ಈ ಮೂಲಕ ಸಂಘಟನೆಯನ್ನು ಒಂದು ಕಡೆ ಭದ್ರಪಡಿಸುತ್ತಾ ಇನ್ನೊಂದು ಕಡೆ ತಮ್ಮ ಎಂದಿನ `ಕಾಂಗ್ರೆಸ್ ಮುಕ್ತ ಭಾರತ' ಕಲ್ಪನೆಯನ್ನು ಸಾಕಾರಗೊಳಿಸುವತ್ತ ಮುಂದಿನ ಹೆಜ್ಜೆಗೆ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ. ಕಾರ್ಯಕಾರಿಣಿಯಲ್ಲಿ ಪ್ರತಿರಾಜ್ಯದ ಪ್ರಮುಖರಿಂದಲೂ ಮುಖಾಮುಖಿ ನಡೆಸಿ ಮಾಹಿತಿ ಕಲೆ ಹಾಕಿರುವ ಅಮಿತ್ ಶಾ ಲೆಕ್ಕಾಚಾರ ಆರಂಭಿಸಿದರೆ.
ಇನ್ನೊಂದೆಡೆ ಮೋದಿಯವರು ಆಯಾಯ ರಾಜ್ಯ ಸರ್ಕಾರ-ಆಡಳಿತದ ಕುರಿತಾಗಿ ಮಾಹಿತಿ ಕಲೆ ಹಾಕಿದರು. ದೆಹಲಿ ಫಲಿತಾಂಶದ ಬಗ್ಗೆ ಚಿಂತೆಮಾಡದೇ ಮುಂಬರುವ ಬಿಹಾರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಯೋಜನೆ ರೂಪಿಸಿ ಕೊಂಡರು. ಹಾಗೆಯೇ ದಕ್ಷಿಣ ರಾಜ್ಯಗಳ ಬಗ್ಗೆ ಪ್ರಾಥಮಿಕ ಹಂತದ ಭೂಮಿಕೆ ಸಿದ್ಧ ಮಾಡಿಕೊಂಡು ಆಯಾಯ ರಾಜ್ಯದ ಪ್ರಮುಖರಿಗೆ ಸಂದೇಶಗಳನ್ನೂ ರವಾನಿಸಿದರು.
ಒಟ್ಟಾರೆ ಸಂಘಟನೆ, ಸರ್ಕಾರದ ದೃಷ್ಟಿಯಿಂದ ಮುಂದಾಗಬೇಕಾದ ಕಾರ್ಯಯೋಜನೆಗಳು, ಮುಂಬರುವ ರಾಜಕೀಯ ಯುದ್ಧಗಳಿಗೆ ಬೇಕಾದ `ಅಸ್ತ್ರಗಳು' ಬೆಂಗಳೂರು ಕಾರ್ಯಕಾರಿಣಿಯಲ್ಲಿ ಸಿದ್ಧವಾದವು. ಅವುಗಳ `ಪ್ರಯೋಗ' ಯಾವ ಸಂದರ್ಭದಲ್ಲಿ ಯಾವ ರೀತಿ ಆಗಬೇಕು ಎಂಬುದನ್ನೂ ಸೂಚ್ಯವಾಗಿ ನಾಯಕರಿಗೆ ತಿಳಿಸಲಾಗಿದೆ.