ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗವನ್ನಾಗಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ಬಿಬಿಎಂಪಿಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಯನ್ನು ಸಿಐಡಿಗೆ ವಹಿಸಲೂ ತೀರ್ಮಾನಿಸಲಾಗಿದೆ.
ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಒದಗಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮಧ್ಯಾಹ್ನ ತುರ್ತು ಸಚಿವ ಸಂಪುಟ ಸಭೆ ನಡೆಸಿದರು. ಈ ಸಭೆಯಲ್ಲಿ ಬಿಬಿಎಂಪಿಯನ್ನು ಮೂರು ಭಾಗವನ್ನಾಗಿಸುವ ಕಾಯಿದೆಯನ್ನು ಜಾರಿಗೆ ತರಬೇಕಾದರೆ ವಿಧಾನಮಂಡಲದ ಅಧಿವೇಶನ ಕರೆಯಬೇಕು. ಅದು ಈಗ ಸಾಧ್ಯವಿಲ್ಲ. ಹೀಗಾಗಿ, ಸುಗ್ರೀವಾಜ್ಞೆ ಮೂಲಕ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ನಿರ್ದಿಷ್ಟ ಸೂಚನೆಯೂ ಇದೆ. ಹೀಗಾಗಿ, ನ್ಯಾಯಾಂಗ ನಿಂದನೆಯೂ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿಯ 198 ವಾರ್ಡ್‍ಗಳಿಗೆ ಮೀಸಲು ಪಟ್ಟಿ ಪ್ರಕಟಿಸುವ ಪ್ರಕ್ರಿಯೆಗೆ ತಡೆ ಬೇಡ. ಅದು ಪ್ರಕಟವಾಗಲಿ. ಆದರೆ, ಸುಗ್ರೀವಾಜ್ಞೆ ಹೊರಡಿಸೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾಮಗಾರಿಗಳ ಸಿಐಡಿ ತನಿಖೆ: ಇದರ ಜತೆಯಲ್ಲೇ ಬಿಬಿಎಂಪಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳು, ಅವ್ಯವಹಾರಗಳ ಬಗ್ಗೆ ಐಎಎಸ್ ಅಧಿಕಾರಿ
ರಾಜೇಂದ್ರಕುಮಾರ್ ಕಟಾರಿಯಾ ನೀಡಿರುವ ವರದಿಯನ್ನು ಆಧರಿಸಿ ಎಲ್ಲ ಕಾಮಗಾರಿಗಳ ತನಿಖೆ ನಡೆಸಲು ಸಿಐಡಿಗೆ ಪ್ರಕರಣ ವಹಿಸಬೇಕೆಂದೂ ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಚಿವ ಸಂಪುಟದ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸುವ ಸಂಪ್ರದಾಯ ಇಂದು ಇರಲಿಲ್ಲ. ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್‍ನಲ್ಲಿ ಪ್ರಕರಣ ಇರುವಾಗ ಸಚಿವ ಸಂಪುಟದ ನಿರ್ಧಾರಗಳನ್ನು ಪ್ರಕಟಿಸುವುದು ಬೇಡ ಎಂದು ನಿರ್ಧರಿಸಲಾಗಿತ್ತು.
ಮಹಿಳೆಯರಿಗೆ 97 ವಾರ್ಡ್
ಬಿಬಿಎಂಪಿಯ 198 ವಾರ್ಡ್‍ಗಳಿಗೆ ಮೀಸಲುಪಟ್ಟಿ ಪ್ರಕಟಿಸಿರುವ ನಗರಾಭಿವೃದ್ಧಿ ಇಲಾಖೆ ಏ.4ರ ಅಧಿಸೂಚನೆಯಲ್ಲಿ ಹೈಕೋರ್ಟ್‍ನ ಮಾ.30ರ ಆದೇಶವನ್ನು ಉಲ್ಲೇಖಿಸಿದೆ. 2011ರ ಜನಗಣತಿಯಂತೆ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976ರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲು ನೀಡಲಾಗಿದೆ ಎಂದು ಹೇಳಿದೆ. ಮಹಿಳೆಯರಿಗೂ ಇದೇ ಕಾಯ್ದೆಯಂತೆ ಮೀಸಲು ನೀಡಲಾಗಿದೆ ಎಂದು ಹೇಳಿದೆ.
ಹೈಕೋರ್ಟ್ ಸರ್ಕಾರಕ್ಕೆ ನೀಡಿದ ಮಾ.30ರಂದು ನೀಡಿದ ಆದೇಶದ ಪ್ರಕಾರ ಬಿಬಿಎಂಪಿಯ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಏ.13ರೊಳಗಾಗಿ ಮೀಸಲು ಪಟ್ಟಿ ಪ್ರಕಟಿಸುವಂತೆ ಸೂಚಿಸಲಾಗಿತ್ತು. ಕೆಎಂಸಿ ಕಾಯ್ದೆ 1976ರ ಕಲಂ 21 ಪ್ರಕಾರ ವಾರ್ಡ್‍ಗಳಿಗೆ ಮೀಸಲು ನಿಗದಿಮಾಡಲಾಗಿದೆ. ಕಾಯ್ದೆಯ ಕಲಂ 7(2)ರ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗಗಳಿಗೆ ಮೀಸಲು ನಿಗದಿ ಮಾಡಲಾಗಿದೆ. ಕಲಂ 7(3) ಹಾಗೂ 7(4) ರಂತೆ ಹಿಂದುಳಿದ ವರ್ಗ-ಎ ಹಾಗೂ ಹಿಂದುಳಿದವರ್ಗ-ಬಿ ಹಾಗೂಮಹಿಳೆಯರಿಗೆ ಮೀಸಲು ನಿಗದಿಪಡಿಸಲಾಗಿದೆ. 198 ವಾರ್ಡ್‍ಗಳಲ್ಲಿ ಒಟ್ಟಾರೆ 97 ವಾರ್ಡ್ ಗಳು ಮಹಿಳೆಯರಿಗೆ ಮೀಸಲಾಗಿವೆ.
ಸುಗ್ರೀವಾಜ್ಞೆಯೋ, ಚುನಾವಣೆಯೋ? ಎರಡು ಹಾದಿ ತಂದಿಟ್ಟ ಫಜೀತಿ
ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಹಿಂದೆಜ್ಜೆ ಇರಿಸಿರುವ ರಾಜ್ಯ ಸರ್ಕಾರ, ಒಂದು ಕಡೆ ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಿದೆ.
ಇನ್ನೊಂದೆಡೆ 198 ವಾರ್ಡ್‍ಗಳಿಗೆ ಮೀಸಲು ಪಟ್ಟಿ ಪ್ರಕಟಿಸುವ ಮೂಲಕ ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸುವತ್ತಲೂ ಹೆಜ್ಜೆ ಇರಿಸಿದೆ. ಒಟ್ಟಾರೆ ಬಿಬಿಎಂಪಿ ಚುನಾವಣೆಯ ಬಗ್ಗೆ ಅನಿಶ್ಚಿತತೆ ನಿರ್ಮಾಣವಾಗಿದೆ. ಮೀಸಲು ಪಟ್ಟಿ ಪ್ರಕಟ ಮಾಡಿರುವ ಜತೆಗೆ ಬಿಬಿಎಂಪಿಯನ್ನು ಮೂರು ಭಾಗ ಮಾಡಲು ಸುಗ್ರೀವಾಜ್ಞೆ ಹೊರಡಿಸಲು ಹೊರಟಿರುವ ಸರ್ಕಾರ `ಎರಡು ಹಾದಿ'ಯನ್ನು ಅನುಸರಿ ಸುತ್ತಿದೆ. ಹೀಗಾಗಿ, ಮೀಸಲುಪಟ್ಟಿಯಂತೆ ಚುನಾವಣೆ ನಡೆಯುತ್ತದೋ ಅಥವಾ ಮೂರು ಭಾಗವಾದ ನಂತರ ನಡೆಯುತ್ತದೋ ಎಂಬ ಗೊಂದಲ ಸೃಷ್ಟಿಯಾಗಿದೆ.
ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕಾರ್ಪೊರೇಟರ್ ಸಿ.ಕೆ. ರಾಮ ಮೂರ್ತಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು. ಏ.13ರೊಳಗೆ ವಾರ್ಡ್ ಮೀಸಲು ಪಟ್ಟಿ ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತ್ತು. ಒಂದು ವೇಳೆ ಈ ಗಡುವಿನೊಳಗೆ ಮೀಸಲುಪಟ್ಟಿ ಪ್ರಕಟಿಸದಿದ್ದರೆ ಹಿಂದಿನ ಮೀಸಲು ಪಟ್ಟಿಯಂತೆಯೇ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗಕ್ಕೆ ಹೈಕೋರ್ಟ್ ಮಾ.30ರಂದು ಆದೇಶಿಸಿತ್ತು.
ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಯುತ್ತದೆ ಎಂದು ನಗರ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಹೇಳುತ್ತಿದ್ದರು. ಆದರೆ, ಇದೀಗ ವಾರ್ಡ್ ಮೀಸಲುಪಟ್ಟಿಯನ್ನು ಹೊರಡಿಸುವ ಜತೆಗೆ ಬಿಬಿಎಂಪಿಯನ್ನು ಮೂರು ಭಾಗವನ್ನಾಗಿಸುವ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು
ಮುಂದಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.
198 ವಾರ್ಡ್‍ಗಳಿಗೆ ಮೀಸಲು ಪ್ರಕಟಿಸಲಾಗಿದ್ದು, ಅದಕ್ಕೆ ಆಕ್ಷೇಪನೆ ಸಲ್ಲಿಸಲು ಏಳು ದಿನಗಳ ಅವಕಾಶ ಇದೆ. ಇನ್ನು ಮೂರು ಭಾಗವನ್ನಾಗಿಸುವ ಸುಗ್ರೀವಾಜ್ಞೆ ಹೊರಬಿದ್ದರೆ ಅದನ್ನು ಆಕ್ಷೇಪಿಸಲು ಒಂದು ತಿಂಗಳ ಅವಕಾಶ ಇರುತ್ತದೆ. ಆಗ ರೂಪುರೇಷೆಯೇ ಬೇರಾಗುತ್ತದೆ. ಹೀಗಾಗಿ ಮೀಸಲುಪಟ್ಟಿ, ಸುಗ್ರೀವಾಜ್ಞೆ ಎರಡೂ ಇದ್ದರೆ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಈ ವಿಷಯ ಮತ್ತೆ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.