ಜಿಲ್ಲಾ ಸುದ್ದಿ

ಮೀಸಲು ರಾಜಕಾರಣ!

ಬೆಂಗಳೂರು: ಜೆಪಿ, ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ಬೆಂಗಳೂರು: ಒಂದೆಡೆ ಚುನಾವಣೆ ಗೊಂದಲ ಸೃಷ್ಟಿ, ಮತ್ತೊಂದೆಡೆ ವಾರ್ಡ್ ಮೀಸಲಿನ ತಂತ್ರ. ಚುನಾವಣೆ ನಡೆದರೆ ಸ್ಥಾನ ಉಳಿಸಿಕೊಳ್ಳಲು `ತಮ್ಮ ಮೀಸಲು' ಮಂತ್ರ!

ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಚುನಾವಣೆ ಮುಂದೂಡುವ ನೆಪವನ್ನೇನೋ ಹೂಡಿತ್ತು. ಆದರೆ ಹೈಕೋರ್ಟ್ ಆದೇಶದಿಂದಾಗಿ ಮೀಸಲು ಪಟ್ಟಿ ಪ್ರಕಟಿಸಲೇಬೇಕಾದ ಅನಿವಾರ್ಯಕ್ಕೆ ಸಿಕ್ಕಿಕೊಂಡಿತ್ತು. ಅದರಂತೆ ಮೀಸಲು ಪಟ್ಟಿಯನ್ನೂ ಪ್ರಕಟಿಸಿದೆ. ಅದು ಮೇಲ್ನೋಟಕ್ಕೇ `ಸ್ವಪಕ್ಷಪಾತ' ಎಂಬುದು ಸಾಬೀತಾಗಿದೆ. ಬಿಬಿಎಂಪಿಯಲ್ಲಿ ಹಾಲಿ ಇರುವ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳ ಮೀಸಲು ಬಹುತೇಕ ಬದಲಾಗಿಲ್ಲ. ಆದರೆ, ಬಿಜೆಪಿ-ಜೆಡಿಎಸ್ ಸದಸ್ಯರಿರುವ ವಾರ್ಡ್‍ಗಳ ಮೀಸಲು ಬಹುತೇಕ ಬದಲಾಗಿವೆ.

2011ರ ಜನಗಣತಿಯಂತೆ ಮೀಸಲು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲು(ಶೇ.50ಕ್ಕಿಂತ ಕಡಿಮೆ) ನೀಡಬೇಕೆಂಬ ಕಾಯಿದೆಯನ್ನು ಅನುಸರಿಸಿದೆಯಾದರೂ, ಅದೆಲ್ಲ ಬದಲಾವಣೆ ಬಹುತೇಕ ತನ್ನ ವಿರೋಧಿ ಪಕ್ಷಗಳ ವಾರ್ಡ್ ಗಳಲ್ಲೇ ಹೆಚ್ಚು ಮಾಡಿದೆ. ಬಿಬಿಎಂಪಿಗೆ ನಿಗದಿತ ಸಮಯದಲ್ಲಿ ಚುನಾವಣೆ ಗ್ಯಾರಂಟಿ ಎನ್ನುವ ಸರ್ಕಾರ, ಅದನ್ನು ಮೂರು ಭಾಗವಾಗಿ ಮಾಡುವ ಹಠವನ್ನು ಬಿಟ್ಟಿಲ್ಲ. ಹೀಗಾಗಿ ವಿಭಜನೆ ಪ್ರಕ್ರಿಯೆಗೆ ಕಾಲಾವಕಾಶ ಕೇಳಲು ಮೇಲ್ಮನವಿ ಸಲ್ಲಿಸುವುದರೊಂದಿಗೆ ಮೀಸಲು ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಇದರಲ್ಲಿ ಸಾಕಷ್ಟು ಅವೈಜ್ಞಾನಿಕವಾಗಿ ಮೀಸಲನ್ನು ತರಾತುರಿಯಲ್ಲಿ ತಯಾರಿಸಿದ್ದು, ಅದು ನ್ಯಾಯಾಲಯದ ಮೆಟ್ಟಿಲೇರಬೇಕು ಎಂಬ ಉದ್ದೇಶವೂ ಇದ್ದಂತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಒಂದು ವೇಳೆ ಚುನಾವಣೆ ನಡೆಯುವ ಪ್ರಸಂಗ ಎದುರಾದರೆ ಆಗ ಮೀಸಲು ಮೂಲಕವಾದರೂ ನಗರದಲ್ಲಿ ಅಧಿಕಾರ ಪಡೆಯಬಹುದೆಂಬ ದೂರಾಲೋಚನೆ ಕಾಂಗ್ರೆಸ್ ಸರ್ಕಾರಕ್ಕಿದೆ. ಹೀಗಾಗಿ ಕಾಂಗ್ರೆಸ್ ಪ್ರಭಾವ ಹೆಚ್ಚಿಸಿಕೊಳ್ಳಲು ವಾರ್ಡ್‍ಗಳಲ್ಲಿ ಮೀಸಲು ತಂತ್ರ ಅನುಸರಿಸಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಮೊದಲಿಗೆ ಬಿಬಿಎಂಪಿ ವಿಸರ್ಜಿಸುವ ಬಗ್ಗೆ ಶೋಕಾಸ್ ನೋಟಿಸ್ ನೀಡಿದ್ದ ಸರ್ಕಾರ ನಂತರ ವಿಭಜನೆ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಹೈಕೋರ್ಟ್ ನಿರ್ದೇಶನದಂತೆ ವಿಭಜನೆ ಬದಲು ಚುನಾವಣೆ ನಡೆಸುವ ಅನಿವಾರ್ಯ ಎದುರಾದಾಗ ಮೀಸಲು ಪಟ್ಟಿ ಪ್ರಕಟಿಸಿದೆ.

ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಇನ್ನು ಆರು ದಿನ ಕಾಲಾವಕಾಶವಿದೆ. ಆಕ್ಷೇಪಣೆಗಳೆಲ್ಲವೂ ಪರಿಶೀಲನೆಯಾಗುತ್ತದೆ ಎಂಬ ಖಾತರಿ ಏನಿಲ್ಲ. ಅಲ್ಲದೆ, ಏ.13ಕ್ಕೆ ಅಂತಿಮ ಮೀಸಲು ಪ್ರಕಟಿಸಿ ಹೈಕೋರ್ಟ್‍ನ ಚಾಟಿಯೇಟಿನಿಂದ ಸರ್ಕಾರ ತಪ್ಪಿಸಿಕೊಳ್ಳಬೇಕಿದೆ. ಜತೆಗೆ ಮೂರು ಭಾಗವಾಗಿಸುವ ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ. ಹೀಗಾಗಿ, ವಿಭಜನೆ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ಕೇಳಲು ಸಲ್ಲಿಸಲಿರುವ ಮೇಲ್ಮನವಿಯನ್ನೂ ಸಲ್ಲಿಸುವ ಪ್ರಯತ್ನ ಆರಂಭವಾಗಿದೆ. ಈ ಮೂಲಕವಾದರೂ ಬಿಬಿಎಂಪಿ ಚುನಾವಣೆ ತಕ್ಷಣಕ್ಕೆ ಮುಂದಕ್ಕೆ ಹಾಕುವ ಸರ್ವಪ್ರಯತ್ನವೂ ನಡೆದಿದೆ.

SCROLL FOR NEXT