ಬೆಂಗಳೂರು: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಬೆಂಗಳೂರು ವಿವಿ ಸೇರಿದಂತೆ ರಾಜ್ಯದ ಮೂರು ವಿವಿಗಳಲ್ಲಿನ ದೂರ ಶಿಕ್ಷಣ ಕೋರ್ಸುಗಳ ಮಾನ್ಯತೆರದ್ದು ಮಾಡಿರುವುದರ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಬೆಂಗಳೂರು ವಿವಿ ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ಯಾವುದೇ ಸಮಸ್ಯೆಯಾಗಿಲ್ಲ ಎಂದು ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅಭಯ ನೀಡಿದ್ದಾರೆ.
ಕೋರ್ಸುಗಳ ಮಾನ್ಯತೆ ರದ್ದುಪಡಿಸಿರುವ ಬಗ್ಗೆ ಮಾತನಾಡಿರುವ ತಿಮ್ಮೇಗೌಡರನ್ನು ಬೆಂಗಳೂರು ವಿವಿ ಪರವಾಗಿ ಪ್ರತಿ ವರ್ಷ ಯುಜಿಸಿಗೆ ಅಗತ್ಯ ಮಾಹಿತಿ ಮತ್ತು ನಿಯಮ ಪಾಲಿಸಿ ಅನುಮತಿ ಪಡೆಯಲಾಗುತ್ತಿದೆ. ಯುಜಿಸಿಯಿಂದ ನಮಗೆ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ ಎನ್ನುವುದನ್ನು ಬಿಟ್ಟರೆ ನಮ್ಮಿಂದ ಯಾವುದೇ ತಪ್ಪಾಗಿಲ್ಲ. ಈ ಆದೇಶ ಯಾಕೆ ಹೊರಡಿಸಲಾಗಿದೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಆತಂಕ ಪಡಬಾರದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸಂಸತ್ತಿನ ಕಲಾಪ ವೇಳೆ ಇಬ್ಬರು ಸಂಸದರು ಎತ್ತಿದ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಈ ರದ್ದುಪಡಿಸಿರುವ ಮಾಹಿತಿಯನ್ನು ನೀಡಿತ್ತು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನೀಡಿರುವ ಉತ್ತರದಲ್ಲಿ, ದೇಶದ 16 ರಾಜ್ಯಗಳಲ್ಲಿನ 31 ವಿವಿಗಳಲ್ಲಿ ನಡೆಸುತ್ತಿರುವ ದೂರಶಿಕ್ಷಣ ಕೋರ್ಸುಗಳ ಮಾನ್ಯತೆಯನ್ನು ರದ್ದುಪಡಿಸಲಾಗಿದೆ ಎಂದಿದ್ದರು. ಈ ಪೈಕಿ ರಾಜ್ಯದ ಮೂರು ವಿವಿಗಳು ಸೇರಿದ್ದು, ಬೆಂಗಳೂರು ವಿವಿಯ ಹೆಸರಿರುವುದನ್ನು ಸಚಿವರೇ ಖಚಿತಪಡಿಸಿದ್ದರು. ಈ ಹಿಂದೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕೋರ್ಸುಗಳನ್ನು ರದ್ದುಪಡಿಸಿ ಆದೇಶಿಸಿದ್ದನ್ನು ಸ್ಮರಿಸಬಹುದು.