ಅಶ್ವಿನ್ ರಾವ್ 
ಜಿಲ್ಲಾ ಸುದ್ದಿ

ಲೋಕಾ ಹಗರಣ: ಅಶ್ವಿನ್ ನಿರೀಕ್ಷಣಾ ಜಾಮೀನು ತೀರ್ಪು 17ಕ್ಕೆ

ಲೋಕಾಯುಕ್ತ ಕಚೇರಿ ಲಂಚ ಪ್ರಕರಣ ಸಂಬಂಧ ಮೊದಲನೇ ಆರೋಪಿ ಅಶ್ವಿನ್‍ರಾವ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ...

ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಪ್ರಕರಣ ಸಂಬಂಧ ಮೊದಲನೇ ಆರೋಪಿ ಅಶ್ವಿನ್‍ರಾವ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆಗಸ್ಟ್  17ಕ್ಕೆ ತೀರ್ಪು ಕಾಯ್ದಿರಿಸಿದೆ. ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವರು ದಾಖಲಿಸಿದ್ದ ದೂರಿನಲ್ಲಿ ಆರೋಪಿಯಾಗಿರುವ ಅಶ್ವಿನ್‍ರಾವ್ ಅವರನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ಇದುವರೆಗೂ ಬಂಧಿಸಿಲ್ಲ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇ ಕೆಂದು ಅಶ್ವಿನ್ ಪರ ವಕೀಲ ಸಂದೀಪ್ ಪಾಟೀಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರವೂ ಮುಂದುವರೆಯಿತು.

ಅಶ್ವಿನ್ ರೀತಿ ಕಾಣುವ ವ್ಯಕ್ತಿ: ಕ್ರೈಂ ನಂಬರ್ 56ರಲ್ಲಿ ಕೃಷ್ಣಮೂರ್ತಿ ಅವರ ದೂರಿನಲ್ಲಿ ಅಶ್ವಿನ್ ರಾವ್ ಅವರು ತನ್ನನ್ನು ಲೋಕಾಯುಕ್ತ ಕಚೇರಿಗೆ ಕರೆಸಿಕೊಂಡಿರುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲೂ ಅಶ್ವಿನ್‍ರಾವ್ ಅವರಂತೇ ಕಾಣುವ ವ್ಯಕ್ತಿ ಎಂದು ವಿವರಿಸಿದ್ದಾರೆ. ಜುಲೈ 29ರಂದು ಎಸ್‍ಐಟಿ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆಯೂ ಅಶ್ವಿನ್‍ರಾವ್ ಅವರಂತೆ ಕಾಣುವ ವ್ಯಕ್ತಿ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಬಂಧಿತನಾಗಿರುವ ಮತ್ತೊಬ್ಬ ಆರೋಪಿ ಅಶೋಕ್‍ಕುಮಾರ್‍ನನ್ನೇ ಲೋಕಾಯುಕ್ತ ಕಚೇರಿಯಲ್ಲಿ ಭೇಟಿ ಮಾಡಿದ್ದಾಗಿ ಕೃಷ್ಣಮೂರ್ತಿ ಹೇಳಿದ್ದಾರೆಂದು ಗೊತ್ತಾಗಿದೆ. ಹೀಗಾಗಿ, ಅಶ್ವಿನ್ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 8 ಹಾಗೂ ಐಪಿಸಿ ಕಲಂ 348, 419, 420 ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಅಶ್ವಿನ್‍ರಾವ್‍ಗೂ ಆರೋಪಗಳಿಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

ಭ್ರಷ್ಟಾಚಾರ ನಡೆದಿದ್ದಕ್ಕೆ ದಾಖಲೆಗಳಿವೆ: ಪ್ರತಿವಾದ ಮಂಡಿಸಿದ ಎಸ್‍ಐಟಿ ಪರ ವಿಶೇಷ ಅಬಿಯೋಜಕ ಜನಾರ್ದನ, ಆರೋಪಿ ಲೋಕಾಯುಕ್ತ ನ್ಯಾಯಮೂರ್ತಿಗಳ ಪುತ್ರ. ಭಾವಿ ವ್ಯಕ್ತಿಯು ಆಗಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಈಗಾಗಲೇ ಇವರಿಂದ ಲೋಕಾಯುಕ್ತ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ. ಜನರಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ಇದ್ದ ನಂಬಿಕೆ ಹೋಗಿದೆ. ಇವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿವೆ. ಈ ಬಗ್ಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದೆಂದು ವಾದಿಸಿದರು. ಮತ್ತೆ ವಾದ ಮಂಡಿಸಿದ ವಕೀಲ ಸಂದೀಪ್, ಅಶ್ವಿನ್ ಮೇಲೆ ಯಾವುದೇ ಆರೋಪ ಇಲ್ಲ. ಹೀಗಾಗಿ, ಪ್ರಭಾವ ಬೀರುವ ಪ್ರಶ್ನೆಯೇ ಬರುವುದಿಲ್ಲ. ಅಷ್ಟಕ್ಕೂ ಅವರು ಕರ್ನಾಟಕ ರಾಜ್ಯದವರಲ್ಲ. ತನಿಖೆಗೆ ಸಹಕರಿಸುತ್ತಾರೆ. ಎಲ್ಲಿಗೂ ಓಡಿ ಹೋಗುವುದಿಲ್ಲ. ಆರೋಪಗಳು ಇದ್ದರೂ ಕೂಡಾ ಆರೋಪಿ ಜಾಮೀನು ಪಡೆಯಲು ಅರ್ಹರು ಎಂದು ವಾದಿಸಿದರು.

ಎಸ್‍ಐಟಿ ಅಧಿಕಾರಿಗಳು ಜ್ಯೋತಿಷಿಗಳ ಸೇವೆ ಪಡೆಯುತ್ತಾರೆಯೇ?
ಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ಪಾಲಕ ಎಂಜಿನಿಯರ್ ಚನ್ನಬಸಪ್ಪ ನೀಡಿದ ದೂರಿ ನಲ್ಲಿ ಬಂ„ತರಾಗಿರುವ ಅಶ್ವಿನ್ ಅವರ ಜಾಮೀನು ಅರ್ಜಿ ವಿಚಾರಣೆಯೂ ಮಂಗಳವಾರ ನಡೆಯಿತು. ಎಸ್‍ಐಟಿ ಅಧಿಕಾರಿಗಳಿಗೆ ಅಶ್ವಿನ್ ಬಂಧಿಸಲು ವುದೇ ಕಾರಣಗಳು ಇಲ್ಲ. ಅವರನ್ನು ಬಂಧಿಸಲೇಬೇಕು ಎನ್ನುವ ಒಂದೇ ಉದ್ದೇಶದಿಂದ ಸರ್ಕಾರಿ ಅಧಿಕಾರಿ ಮೂಲಕ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣ ದಾಖಲಾಗುವ ಎರಡುವರೆ ತಾಸುಗಳ ಮೊದಲೇ ಹೈದ್ರಾಬಾದ್‍ನ ಅಶ್ವಿನ್ ಮನೆಗೆ ಹೋಗಿ ಕುಳಿತಿದ್ದರು. ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಜುಲೈ 27ರ ಬೆಳಗ್ಗೆ 10.25ಕ್ಕೆ ದೂರು ದಾಖಲಾಗುತ್ತಿದ್ದಂತೆ ಅಶ್ವಿನ್‍ರನ್ನು ಬಂಧಿಸಿದ್ದಾರೆ. ಅಂದರೆ, ಎಸ್‍ಐಟಿ ಅಧಿಕಾರಿಗಳಿಗೆ ಚನ್ನಬಸಪ್ಪ ಅವರು ಲೋಕಾಯುಕ್ತಕ್ಕೆ ಬಂದು ದೂರು ದಾಖಲಿಸುತ್ತಾರೆ ಎನ್ನುವುದು ಮುಂಚಿತವಾಗಿಯೇ ಹೇಗೆ ಗೊತ್ತಾಯಿತು? ಎಂಜಿನಿಯರ್ ಬಂದು ದೂರು ನೀಡುತ್ತಾರೆ. ಅದಾದ ನಂತರವೇ ಬಂಧಿಸಿ ಎಂದು ಜ್ಯೋತಿಷಿ ಏನಾದರೂ ಎಸ್‍ಐಟಿ ಅಧಿಕಾರಿಗಳಿಗೆ ಭವಿಷ್ಯ ಹೇಳಿದ್ದರೆ?' ಎಂದು ಅಶ್ವಿನ್ ಪರ ವಕೀಲ ಸಂದೀಪ್ ಪಾಟೀಲ್ ಎಸ್‍ಐಟಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿ ನ್ಯಾಯಾಲಯದ ಗಮನಕ್ಕೆ ತಂದರು.

ಅಶ್ವಿನ್ ಬಂಧನಕ್ಕೆ ಷಡ್ಯಂತ್ರ: ಹಲವು ವರ್ಷಗಳ ಅನುಭವ ಹೊಂದಿರುವ ಎಂಜಿನೀಯರ್ ಚನ್ನಬಸಪ್ಪ  ಅವರಿಗೆ ಬೆದರಿಕೆ ಹಾಕಿದ್ದು ಏಪ್ರಿಲ್ ಮೊದಲ ವಾರದಲ್ಲಿ ಎಂದು ಹೇಳಲಾಗಿದೆ. ಆದರೆ, ದೂರು  ನೀಡಿದ್ದು ಜುಲೈ ಕೊನೆ ವಾರದಲ್ಲಿ. ಅಂದರೆ 3 ತಿಂಗಳ ಅಂತರದ ಬಳಿಕ ಅವರು ದೂರು ನೀಡಿದ್ದಾರೆ. ಹೀಗಾಗಿ, ಅಶ್ವಿನ್ ಬಂಧನದ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ವಕೀಲ ಸಂದೀಪ್ ವಾದಿಸಿದರು.

ರೂ. 20 ಲಕ್ಷ ಲಂಚಕ್ಕೆ ಬೇಡಿಕೆ: ಪ್ರತಿವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಜನಾರ್ದನ, ತನಿಖೆ ಪ್ರಗತಿಯಲ್ಲಿದೆ. ಮುಗಿಯುವವರೆಗೂ ಜಾಮೀನು ನೀಡಬಾರದು. ವಿಚಾರಣೆಯಲ್ಲಿ ಚನ್ನಬಸಪ್ಪ ಅವರ ಹೇಳಿಕೆ ಪ್ರಕಾರ, `ನಿಮ್ಮ ಕೇಸ್ ಅನ್ನು ಪರಿಶೀಲಿಸಿ
ನಾನೇ ನೋಡುತ್ತೇನೆ, ಯೋಚಿಸಬೇಡಿ' ಎಂದು ಅಶ್ವಿನ್ ಅವರೇ ನೇರವಾಗಿ ಚನ್ನಬಸ್ಸಪ್ಪ ಅವರಿಗೆ ಹೇಳಿದ್ದಾರೆ. ಅಲ್ಲದೇ, ಚೀಟಿಯೊಂದರಲ್ಲಿ ಹೆಸರು ಹಾಗೂ ಪ್ರಕರಣದ ಸಂಖ್ಯೆ ಬರೆದುಕೊಡುವಂತೆಯು ಕೇಳಿದ್ದಾರೆ. ಬಳಿಕ `ಭಾಸ್ಕರ ಹಾಗೂ ಅಶೋಕ' ಹೇಳಿ ದಂತೆ ಕೇಳಿ ಎಂದು ಚನ್ನಬಸಪ್ಪ ಅವರಿಗೆ ಹೇಳಿದ್ದಾರೆ. ಇಬ್ಬರೂ ಆರೋಪಿಗಳು ಕೇಸ್ ಮುಚ್ಚಿ ಹಾಕಲು ರೂ.20 ಲಕ್ಷ ಹಣ ಕೇಳಿದ್ದರು. ಹಲವು ಹೊತ್ತು ಚರ್ಚೆ ನಡೆದ ನಂತರ ಅಶ್ವಿನ್ ಹೊರಟು ಹೋಗಿದ್ದರು. ಅದಾದ ನಂತರ `ಈ ವ್ಯಕ್ತಿ ಯಾರು? ನನ್ನ ಪ್ರಕರಣವನ್ನು ಹೇಗೆ ಮುಚ್ಚಿ ಹಾಕುತ್ತಾರೆ' ಎಂದು ಚನ್ನಬಸಪ್ಪ ಕೇಳಿದಾಗ, `ಇಷ್ಟೊತ್ತು ನೀವು ಮಾತನಾಡಿದ ವ್ಯಕ್ತಿ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್‍ರಾವ್ ಅವರು ಪುತ್ರ ಅಶ್ವಿನ್‍ರಾವ್' ಎಂದು ಆರೋಪಿಗಳಾದ ಅಶೋಕ್, ಭಾಸ್ಕರ್ ಹೇಳಿದ್ದಾರೆ. ಹೈದ್ರಾಬಾದ್‍ನ ಅವಸಾ ಹೊಟೇಲ್‍ನಲ್ಲಿ ಅಶ್ವಿನ್‍ರಾವ್, 420 ವಿ. ಭಾಸ್ಕರ್, ಅಶೋಕ್ ಕುಮಾರ್ ಹಾಗೂ ದೂರುದಾರ ಚನ್ನಬಸಪ್ಪ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆ.17ಕ್ಕೆ ಮುಂದೂಡಿತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT