ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಹಾರಾಡದ ಬಾವುಟ, ಮರೆಯಾದ ಚಿಹ್ನೆ

ಬೆಂಗಳೂರು: ಪ್ರತಿ ದಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಮುಂದೆ ಹಾರಾಡುತ್ತಿದ್ದ ಪಕ್ಷದ ಬಾವುಟ ಶನಿವಾರ ಹಾರಾಡಲಿಲ್ಲ, ಪಕ್ಷದ ಚಿಹ್ನೆ ಕಾಣಲಿಲ್ಲ!

ಹೈಕೋರ್ಟ್ ನಿರ್ದೇಶನದಂತೆ ಬಿಜೆಪಿಯು ತನ್ನ ಬಾವುಟವನ್ನು ಒಂದು ದಿನದ ಮಟ್ಟಿಗೆ ತೆಗೆದಿಟ್ಟಿತ್ತು. ಕಾರಣ, ಪಕ್ಷದ ಕಚೇರಿ ಮುಂದೆಯೇ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಒಂದು ಮತದಾನ ಕೇಂದ್ರವಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಚಿಹ್ನೆ, ಬಾವುಟ ಪ್ರದರ್ಶಿಸದಂತೆ ಚುನಾವಣಾ ಆಯೋಗ ಪಕ್ಷಕ್ಕೆ ಸೂಚಿಸಿತ್ತು.

ಆಯೋಗದ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಮತಗಟ್ಟೆಯನ್ನೇ ಸ್ಥಳಾಂತರಿಸುವಂತೆ ಆ.14ರಂದು ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಆ.16ರಂದು ಬಿಜೆಪಿಯ ಮನವಿ ತಿರಸ್ಕರಿಸಿದ ಆಯೋಗ ಮತಗಟ್ಟೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಿತು. ತಕ್ಷಣವೇ ಬಿಜೆಪಿಯು ಹೈಕೋರ್ಟ್ ಮೆಟ್ಟಿಲೇರಿತು. ಆದರೆ, ಚುನಾವಣೆ ಅತಿ ಸಮೀಪವಿರುವುದರಿಂದ ಮತದಾನ ಕೇಂದ್ರ ಬದಲಿಸಿದರೆ ಮತದಾರರಿಗೆ ಗೊಂದಲ ಉಂಟಾಗಬಹುದು. ಹೀಗಾಗಿ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪಕ್ಷದ ಧ್ವಜ ಹಾರಿಸುವಂತಿಲ್ಲ ಮತ್ತು ಚಿಹ್ನೆ ಪ್ರದರ್ಶಿಸುವಂತಿಲ್ಲ ಎಂದು ಆದೇಶಿಸಿತು. ಅದರಂತೆ ಶನಿವಾರದ ಮತದಾನದಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಧ್ವಜ ಮತ್ತು ಚಿಹ್ನೆ ಕಾಣದಂತೆ ಮರೆಮಾಚಲಾಗಿತ್ತು.

SCROLL FOR NEXT