ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಮಹಾದಾಯಿ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹರಿಸುವ ಯೋಜನೆ ಜಾರಿ ಕುರಿತಂತೆ ನಿನ್ನೆ ಕರ್ನಾಟಕ ಸರ್ವಪಕ್ಷ ನಿಯೋಗ ಪ್ರಧಾನಿ ಭೇಟಿ ಫಲ ನೀಡದ ಹಿನ್ನಲೆಯಲ್ಲಿ ಕಳಸಾ-ಬಂಡೂರಿ ಹೋರಾಟವನ್ನು ಮತ್ತಷ್ಟು ತೀರ್ವಗೊಂಡಿದೆ.
ಈ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಇಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಧಾರವಾಡ ಮತ್ತು ಗದಗ ಜಿಲ್ಲೆಯ ಹಲವಡೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂರು ಕಡೆ ಸರ್ಕಾರಿ ಬಸ್ಸಿಗೆ ಬೆಂಕಿ ಇಡಲಾಗಿದ್ದು, ಕಲ್ಲು ತೂರಾಟ ನಡೆದಿದೆ.
ನವಲಗುಂದ ಸಮೀಪದ ಯಮನೂರು ಬಳಿ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ, ಅರೇಕುರಹಟ್ಟಿಯಲ್ಲಿ ಇನ್ನೊಂದು ಬಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಹತ್ತಕ್ಕೂ ಹೆಚ್ಚು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನವಲಗುಂದ ಮಾರ್ಗವಾಗಿ ಸಂಚರಿಸುವ ಎಲ್ಲ ಸಾರಿಗೆ ಬಸ್ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳಸಾ ಬಂಡೂರಿ ನಾಲಾ ಮಹಾದಾಯಿ ನದಿ ಜೋಡಣೆ ಯೋಜನೆ ಜಾರಿ ಕುರಿತಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಇತ್ಯರ್ಥಪಡಿಸುವಂತೆ ಕರ್ನಾಟಕ ಸರ್ವಪಕ್ಷ ನಿಯೋಗ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಗ್ರಹಿಸಿತ್ತು. ಆದರೆ ಪ್ರಧಾನಿಗಳಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂಬ ಸುಳಿವು ದೊರೆಯುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ಘಟನೆ ಹಿನ್ನೆಲೆಯಲ್ಲಿ ನವಲಗುಂದ ಮಾರ್ಗವಾಗಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಇತರೆಡೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.