ಜಿಲ್ಲಾ ಸುದ್ದಿ

ಗೋದಾಮಿಗೆ ಬೆಂಕಿ: ತಪ್ಪಿದ ಅನಾಹುತ

ಬೆಂಗಳೂರು: ಶಿವಾಜಿ ನಗರದ ಬಿಬಿಎಂಪಿ ಛೋಟಾ ಮೈದಾನ- ದಲ್ಲಿರುವ ವ್ಯರ್ಥ ವಸ್ತುಗಳ ಸಂಗ್ರಹಗಾರದಲ್ಲಿ ಅಗ್ನಿಅನಾಹುತ ಸಂಭವಿಸಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 11.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ಐದು ಅಗ್ನಿಶಾಮಕ ವಾಹನಗಳು ಒಂದು ತಾಸುಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದರು. ಘಟನೆಯಿಂದ ಶಿವಾಜಿನಗರ ಸುತ್ತ ಮುತ್ತ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೇ ಬಿಎಂಟಿಸಿ ಬಸ್ ನಿಲ್ದಾಣದ ಒಂದು ಪ್ಲಾಟ್ ಫಾರ್ಮ್ ನಲ್ಲಿ ಕೆಲ ಕಾಲ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಹೊರ ಜಿಲ್ಲೆಗಳಿಂದ ಲಾರಿಗಳಲ್ಲಿ ಥರ್ಮಕೋಲ್ ಸೇರಿದಂತೆ ವಿವಿಧ ಕಂಟೇನರ್‍ಗಳಲ್ಲಿ ಮೀನುಗಳನ್ನು ತರಲಾಗುತ್ತಿತ್ತು. ಮೀನುಗಳು ಮಾರುಕಟ್ಟೆಗೆ ತಲುಪಿಸಿದ ನಂತರ ಥರ್ಮಕೋಲ್ ಹಾಗೂ ವಿವಿಧ ರಟ್ಟಿನ ಕಂಟೇನರ್‍ಗಳನ್ನು ಸಂಗ್ರಹಿಸಿಡಲು ಶರೀಫ್ ಎಂಬುವರು ಒಳಾಂಗಣ ಕ್ರೀಡಾಂಗಣದ ನೆಲಮಹಡಿಯನ್ನು ಗುತ್ತಿಗೆ ಪಡೆದಿದ್ದಾರೆ. ಆದರೆ, ವ್ಯರ್ಥ ವಸ್ತುಗಳನ್ನು ಕಾಲ ಕಾಲಕ್ಕೆ ಬೇರೆಡೆಗೆ ಸಾಗಿಸದ ಕಾರಣ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಸಂಗ್ರಹವಾಗಿದ್ದ ವಸ್ತುಗಳಿಗೆ ಸಾರ್ವಜನಿಕರು ಸೇದಿದ ಬೀಡಿ, ಸಿಗರೇಟು ಬಿಸಾಡಿದ್ದ ಕಾರಣ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದರು.

SCROLL FOR NEXT