ದೇವರಾಜ ಅರಸು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಹಿಂದುಳಿದ ವರ್ಗಗಳ 100 ಮಂದಿ ವಿದ್ಯಾರ್ಥಿಗಳನ್ನು ಈ ಬಾರಿ ವಿದೇಶ ವ್ಯಾಸಂಗಕ್ಕೆ ಕಳುಹಿಸುವ ಯೋಜನೆಯ ಫಲಾನುಭವಿಗಳಿಗೆ ಶನಿವಾರ ಸಮಾಜ ಕಲ್ಯಾಣ ಸಚಿವ ಆಂಜನೇಯ ಚೆಕ್ ವಿತರಿಸಿ, ಶುಭ ಹಾರೈಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಸಚಿವರು, ಎಂಜಿನಿಯರಿಂಗ್ ಸೇರಿದಂತೆ ಹಲವು ತಾಂತ್ರಿಕ ಕೋರ್ಸ್ ಗಳಿಗೆ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ 89 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಉಳಿದ 11 ವಿದ್ಯಾರ್ಥಿಗಳನ್ನು ಒಂದು ವಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದರು.
ಅಮೆರಿಕಾದಲ್ಲಿ 44 ವಿದ್ಯಾರ್ಥಿಗಳು, ಜರ್ಮನ್ ನಲ್ಲಿ 18 ಸೇರಿದಂತೆ 17 ದೇಶಗಳಲ್ಲಿ ವಿದ್ಯಾರ್ಥಿಗಳು ಹಲವು ಕೋರ್ಸ್ ಗಳ ಅಧ್ಯಯನ ನಡೆಸಲಿದ್ದಾರೆ ಎಂದು ವಿವರಿಸಿದರಲ್ಲದೇ, ಕೋರ್ಸ್ ಗಳಿಗೆ ಅನುಸಾರವಾಗಿ ಪ್ರತಿ ವರ್ಷ 10 ಲಕ್ಷದಂತೆ ಮೂರು ವರ್ಷಗಳಿಗೆ 30 ಲಕ್ಷ ರೂಪಾಯಿಯನ್ನು ಸರ್ಕಾರ ನೀಡುತ್ತಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ 50 ಲಕ್ಷ ರೂಪಾಯಿಗಿಂತಲೂ ಅಧಿಕ ಮೊತ್ತದ ಅವಶ್ಯಕತೆ ಇದ್ದಲ್ಲಿ ದೇವರಾಜು ಅರಸು ನಿಗಮದಿಂದ ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿ ಕೊಡಲಾಗುವುದು. ಮಾತ್ರವಲ್ಲದೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ವೀಸಾ, ವಿಮಾನ ಭತ್ಯೆ, ಅಲ್ಲಿನ ಊಟದ ವ್ಯವಸ್ಥೆಗಳ ಭತ್ಯೆಯನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ದೇವರಾಜು ಅರಸು ವಿದೇಶಿ ವ್ಯಾಸಂಗ ವಿದ್ಯಾರ್ಥಿ ವೇತನಕ್ಕೆ ಪ್ರವರ್ಗ 1ರಿಂದ ಕನಿಷ್ಠ 24 ಮಂದಿಗೆ ಅರ್ಜಿ ಸಲಿಸಲು ಅವಕಾಶವಿದೆ. ಒಂದು ವಾರದೊಳಗಾಗಿ ಉಳಿದ 9ಕ್ಕೆ ಅರ್ಹ ವಿದ್ಯಾರ್ಥಿಗಳಿ ಅರ್ಜಿಸಲ್ಲಿಸಿದಲ್ಲಿ ಪರಿಗಣಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಪೂರ್ತಿಗೊಳಿಸದೇ ಇದ್ದಲ್ಲಿ, ಮುಂದಿನ ವರ್ಷಕ್ಕೆ ಅನುದಾನ ನೀಡಲಾಗುವುದಿಲ್ಲ. ವಿದ್ಯಾರ್ಥಿಗಳ ಅಂಕ, ಶೈಕ್ಷಣಿಕ ಪ್ರಗತಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ವಿದ್ಯಾರ್ಥಿಗಳಿಂದ ಕೋರ್ಸ್ ಪೂರ್ಣಗೊಳಿಸುವುದಾಗಿ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos