ಜಿಲ್ಲಾ ಸುದ್ದಿ

ವಿಟಿಯುನಲ್ಲಿ ನೇಮಕಾತಿ ಹಗರಣ ಸರ್ಕಾರಕ್ಕೆ ದೂರು

Srinivasamurthy VN

ಬೆಂಗಳೂರು: ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಉನ್ನತ ಶಿಕ್ಷಣ ಇಲಾಖೆಗೆ ದೂರು  ಸಲ್ಲಿಕೆಯಾಗಿದೆ.

ಜೊತೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಮೂಹಿಕ ಸಾಲ ಮಂಜೂರಾತಿಯಾಗಿರುವುದು ಆ ಹಣ ನೇಮಕಾತಿ ಸಂದರ್ಭದಲ್ಲಿ ಹಂಚಿಕೆಯಾಗಿರುವ ಬಗ್ಗೆ ಗಂಭೀರ ಶಂಕೆಯೂ ವ್ಯಕ್ತವಾಗಿದೆ.  ವಿಟಿಯುನಿಂದ ಇದೇ ಅಕ್ಟೋಬರ್ 30ರಂದು 319 ಮಂದಿಯನ್ನು ನೇಮಕ ಮಾಡಿದ್ದು, ಅವ್ಯವಹಾರವಾಗಿದೆ ಎಂಬುದು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ಕರಣ್ ಅವರ ಆರೋಪ. ಈ ಸಂಬಂಧ ಸರ್ಕಾರಕ್ಕೆ ದೂರು ಸಲ್ಲಿಸಿರುವ ಅವರು ಬುಧವಾರ ರಾಜ್ಯಪಾಲರಿಗೂ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.

ಅನೇಕ ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೋದಕೇತರ ಸಿಬ್ಬಂದಿಯನ್ನು ಖಾಯಂಗೊಳಿಸಿರುವುದು ಒಳ್ಳೆಯ ಸಂಗತಿ. ಆದರೆ, ನ್ಯಾಯಾಲಯದ ನಿರ್ದೇಶನದ  ಪ್ರಕಾರ ಗರಿಷ್ಠ 100 ಮಂದಿಯನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬಹುದು. ಇಲ್ಲಿ ನ್ಯಾಯಾಲಯದ ನಿರ್ದೇಶನಕ್ಕೂ ಮೀರಿ ನೇಮಕಾತಿ ಮಾಡಿಕೊಳ್ಳಲಾಗಿದೆ. ನೇಮಕಾತಿ ವಿಚಾರದಲ್ಲಿ  ರೋಸ್ಟರ್ ನಿಯಮ ಪಾಲಿಸಿಲ್ಲ. ಜೊತೆಗೆ ವಿವಿ ಕಾರ್ಯಕಾರಿ ಮಂಡಳಿಯನ್ನೂ ಕತ್ತಲಲ್ಲಿ ಇಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಿಯಮ ಮೀರಿ ಇಷ್ಟೊಂದು ಜನರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಕೊಟ್ಟವರು ಯಾರು. ಮೀಸಲಾತಿ ನಿಯಮ ಪಾಲನೆಯಾಗದೇ ಹೇಗೆ ನೇಮಕ ಮಾಡಿಕೊಂಡರು, ಸರ್ಕಾರದ  ಅನುಮತಿ ಇತ್ತೇ ಎಂಬುದು ಕರಣ್ ಅವರು ಸರ್ಕಾರದ ಮುಂದಿಟ್ಟಿರುವ ಪ್ರಶ್ನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಣದ ಅವ್ಯವಹಾರವಾಗಿದೆ ಎಂದು ಕಾರ್ಯಕಾರಿ  ಮಂಡಳಿ ಸದಸ್ಯ ಶಂಕೆ ವ್ಯಕ್ತ ಪಡಿಸಿದ್ದಾರೆ. ವಿಸ್ತರಣಾ ಶಾಖೆಯ ಬಳಿ ಇರುವ ರಾಷ್ಟ್ರೀಕೃತ ಬ್ಯಾಂಕಿನಿಂದ 170 ಸಿಬ್ಬಂದಿಗೆ ವೈಯಕ್ತಿಕ ಸಾಲ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಸಾಲ  ನೀಡಲಾಗಿದ್ದು, ಈ ಹಣ ನಗದು ರೂಪದಲ್ಲಿ ವಿವಿಯ ಕೆಲವು ವ್ಯಕ್ತಿಗಳಿಗೆ ಸಂದಾಯವಾದ ನಂತರವೇ ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಈ ಬಗ್ಗೆ  ಕೆಲವು ಸಿಬ್ಬಂದಿ ತಮ್ಮ ಬಳಿ  ಹೇಳಿಕೊಂಡಿದ್ದಾರೆ ಎಂದು ಕರಣ್ ತಿಳಿಸಿದ್ದಾರೆ.

SCROLL FOR NEXT