ಜಿಲ್ಲಾ ಸುದ್ದಿ

ಲೋಕಾ ನೇಮಕ ಚುರುಕು

Manjula VN

ಬೆಂಗಳೂರು: ರಾಜ್ಯ ಸರ್ಕಾರ ಒಂದೆಡೆ ಉಪಲೋಕಾಯುಕ್ತ ಸುಭಾಷ್ಬಿ. ಅಡಿ ಪದಚ್ಯುತಿಗೆ ಕಾನೂನು ಪ್ರಕ್ರಿಯೆ ಚುರುಕುಗೊಳಿಸಿರುವ ಬೆನ್ನಲ್ಲೇ ಇನ್ನೊಂದು ಉಪಲೋಕಯುಕ್ತರ ನೇಮಕಕ್ಕೂ ಮುಂದಾಗಿದೆ.

ನ್ಯಾ. ಕೆ.ಎಲ್.ಮಂಜುನಾಥ್ ಅವರನ್ನು ಉಪಲೋಕಾಯುಕ್ತ ರನ್ನಾಗಿ ನೇಮಕ ಮಾಡುವುದಕ್ಕೆ ರಾಜ್ಯಪಾಲರು ನಿರಾಕರಿಸಿ ರುವ ಹಿನ್ನೆಲೆಯಲ್ಲಿ ಹೊಸಬರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಬಾರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜತೆಗೆ ಮೊದಲು ಚರ್ಚೆ ನಡೆಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಮುಖ್ಯ ನ್ಯಾಯ ಮೂರ್ತಿ ಎಸ್.ಕೆ. ಮುಖರ್ಜಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನ್ಯಾ ಅಜಿತ್ ಗುಂಜಾಳ್ ಅಥವಾ ನ್ಯಾ. ಎನ್.ಆನಂದ್ ಅವರನ್ನು ಉಪ ಲೋಕಾಯುಕ್ತ ರಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಇವರಿಬ್ಬರ ಪೈಕಿ ಯಾರಾದರೊಬ್ಬರ ನೇಮಕಕ್ಕೆ ಮುಖ್ಯ ನ್ಯಾಯಮೂರ್ತಿ ಗಳಿಂದಲೂ ಸಕಾರಾತ್ಮಕ ಪ್ರಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸದ್ಯದಲ್ಲೇ ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿಗಳು, ಉಭಯ ಸದನದ ಪ್ರತಿಪಕ್ಷ ನಾಯಕರ ಜತೆ ಚರ್ಚೆ ನಡೆಸಿ ಹೊಸ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಜತೆಗೆ ಇನ್ನೂ ಎರಡು ಹೆಸರುಗಳು ಪರಿಶೀಲನೆ ಹಂತದಲ್ಲಿದ್ದು, ಈ ಬಾರಿ ಅರ್ಹರ ನೇಮಕದ ಬಗ್ಗೆ ಸರ್ಕಾರ ಒಲ್ಲದ ಮನಸಿನಿಂದ ಮುಂದಾಗಿದೆ.

ಚುರುಕಾದ ಪ್ರಕ್ರಿಯೆ: ಇದೆಲ್ಲದರ ಮಧ್ಯೆ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಪದಚ್ಯುತಿ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಪ್ರಯತ್ನ ಆರಂಭವಾಗಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಜತೆ ಗುರುವಾರ ಸಾಯಂಕಾಲ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಸಭೆ ರದ್ದಾಗಿದ್ದು ಶನಿವಾರ ನಡೆಯಲಿದೆ.

SCROLL FOR NEXT