ಬೆಂಗಳೂರು: ಬೈಕ್ ಚಾಲಕರೊಬ್ಬರಿಂದ ರೂ 100 ದಂಡದ ಬದಲು ರೂ 1,100 ಪಡೆದು ರಶೀದಿ ನೀಡದೆ, ಬೈಕ್ ಜಪ್ತಿಗೆ ಮುಂದಾದ ಆರೋಪದ ಮೇಲೆ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಆಂಜನಪ್ಪ ಸೋಮವಾರ ಅಮಾನತುಗೊಂಡಿದ್ದಾರೆ.
ಡಿ.5ರಂದು ರಾತ್ರಿ 11ರ ವೇಳೆಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಅಮೃತ್ ಬೇರಿ
ಬೇಲಿಮಠ ಜಂಕ್ಷನ್ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಮದ್ಯಪಾನ
ಮಾಡಿ ವಾಹನ ಚಾಲನೆ ಮಾಡುವವರನ್ನು ತಪಾಸಣೆ ನಡೆಸುತ್ತಿದ್ದ ಎಸ್.ಆಂಜನಪ್ಪ,
ಅಮೃತ್ ಬೇರಿ ಅವರ ಬೈಕ್ ತಡೆದು ನಿಮ್ಮ ಬೈಕ್ ಕರ್ಕಶ ಹಾರ್ನ್ ಹೊಂದಿದೆ.
ಅಲ್ಲದೇ ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳಿ, ರೂ 1,100 ದಂಡ ಪಾವತಿಸುವಂತೆ ಹೇಳಿದ್ದಾರೆ. ಬಳಿಕ ದಂಡ ಪಾವತಿಸಿದ ಅಮೃತ್ ಅವರು ರಶೀದಿ ಕೇಳಿದ್ದಾರೆ. ರಶೀದಿ ನೀಡಲು ಎಸ್‍ಐ ಆಂಜನಪ್ಪ ನಿರಾಕರಿಸಿದ್ದಾರೆ. ಬಳಿಕ ಮನೆ ಸೇರಿದ
ಅಮೃತ್, ಸಂಚಾರಿ ನಿಯಮ ಉಲ್ಲಂಘನೆಗೆ ನಿಗದಿ ಮಾಡಿರುವ ದಂಡ ಕುರಿತು ಅಂತರ್ಜಾಲದಲ್ಲಿ ಹುಡುಕಿ ಮಾಹಿತಿ ತೆಗೆದಿದ್ದಾರೆ. ಈ ವೇಳೆ ತಾವು ಪಾವತಿಸಬೇಕಾದ ದಂಡ ಮೊತ್ತ ಕೇವಲ ರೂ 100 ಮಾತ್ರ ಎಂಬುದು ತಿಳಿದಿದೆ.
ತಮ್ಮಿಂದ ಎಸ್‍ಐ ರೂ 1 ಸಾವಿರ ಹೆಚ್ಚುವರಿ ಪಡೆದಿದ್ದಾರೆಂಬುದು ಗೊತ್ತಾಗಿದೆ.
ಈ ಸಂಬಂಧ ಅಮೃತ್ ಬೇರಿ ಬೆಂಗಳೂರು ಪೊಲೀಸ್ ಫೇಸ್ ಬುಕ್ ಪುಟದಲ್ಲಿ ಅಂದು
ನಡೆದ ಘಟನೆಯನ್ನು ವಿವರವಾಗಿ ದಾಖಲಿಸಿದ್ದರು. ಎಸ್‍ಐ ಆಂಜನಪ್ಪ ಘಟನೆ ನಡೆದ
ದಿನದಂದೇ ಬೈಕ್ ಜಪ್ತಿ ಮಾಡುವಂತೆ ಪೇದೆಯೊಬ್ಬರನ್ನು ಮನೆಯ ಬಳಿ ಕಳುಹಿಸಿದ್ದ ಬಗ್ಗೆಯೂ ಅಮೃತ್ ದೂರಿನಲ್ಲಿ ದಾಖಲಿಸಿದ್ದರು. ದೂರು ಕುರಿತ ಪ್ರಾಥಮಿಕ ತನಿಖೆಯಲ್ಲಿ
ಎಸ್‍ಐ ಆಂಜನಪ್ಪ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ
ಅವರನ್ನು ಅಮಾನತು ಮಾಡಲಾಗಿದೆ' ಎಂದು ಪಶ್ಚಿಮ ವಿಭಾಗದ(ಸಂಚಾರ) ಡಿಸಿಪಿ ಎಸ್. ಗಿರೀಶ್ ತಿಳಿಸಿದರು.