ಜಿಲ್ಲಾ ಸುದ್ದಿ

ಬ್ರಿಟಿಷರಿಂದಲೇ ಭಾರತಕ್ಕೆ ಹೊಸ ಬೆಳಕು

Manjula VN

ಬೆಂಗಳೂರು: ಬ್ರಿಟಿಷರ ಆಳ್ವಿಕೆಯಿಂದಲೇ ಭಾರತಕ್ಕೆ ಹೊಸ ಬೆಳಕು ಮೂಡಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಅನಿಕೇತನ ಕನ್ನಡ ಬಳಗ ಮತ್ತು ಐಸಿರಿ ಪ್ರಕಾಶನ ಜಂಟಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಸಿ.ಬಿ.ಹೊನ್ನು ಸಿದ್ಧಾರ್ಥ ರಚಿಸಿದ ಮೀಟುಗೋಲು ವಿಮರ್ಶಾ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬ್ರಿಟಿಷರು ಈ ದೇಶಕ್ಕೆ ಕಾಲಿಡದಿದ್ದರೆ, ಇಂದಿಗೂ ನಮ್ಮನ್ನೆಲ್ಲ ಮನುಸ್ಮೃತಿಯೇ ಆಳುತ್ತಿತ್ತು. ಬ್ರಿಟಿಷರು ನಮ್ಮನ್ನು ಅಧೀನರಾಗಿ ಮಾಡಿಕೊಂಡಿದ್ದು ನಿಜ. ಆದರೆ, ಅವರು ದೇಶಕ್ಕೆ ಬಾರದಿದ್ದರೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ರಾಜಾರಾಮ್ ಮೋಹನ್‍ರಾಯ್, ಪುಲೆ, ಪೆರಿಯಾರ್ ಅವರಂಥ ಪರಿವರ್ತನಾಶೀಲ ಚಿಂತಕರು ಹುಟ್ಟುತ್ತಿರಲಿಲ್ಲ. ಶತಮಾನಗಳಿಂದ ಯಥಾಸ್ಥಿತಿಯಲ್ಲಿದ್ದ ಭಾರತೀಯ ಸಮಾಜದಲ್ಲಿ ಬ್ರಿಟಿಷರಿಂದಲೇ ಹೊಸ ಬೆಳಕು ಬಂತು ಎಂದು ಹೇಳಿದರು.

ಭಾರತದಲ್ಲಿ ಹಿಂದಿನಿಂದಲೂ ಪ್ರಗತಿಪರ ಮನೋಧರ್ಮಗಳ ಮಧ್ಯೆ ಸಂಘರ್ಷ ಹಾಗೂ ಹೋರಾಟಗಳು ನಡೆದುಕೊಂಡು ಬಂದಿವೆ. ಆದರೆ, ಎಷ್ಟೇ ಹೋರಾಟಗಳು ನಡೆದಿದ್ದರೂ, ನಿರೀಕ್ಷಿಸಿದಷ್ಟು ಫಲ ಸಿಕ್ಕಿಲ್ಲ. ಇದಕ್ಕೆ ಯಥಾಸ್ಥಿತಿ ವಾದವನ್ನು ಇಷ್ಟಪಡುವ ಬಹುಜನರ ಮನೋಧರ್ಮವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ , ಶಾಸಕ ಅಶ್ವತ್ಥ ನಾರಾಯಣ, ವಿಮರ್ಶಕ ಪ್ರೊ.ಭೈರಮಂಗಲ ರಾಮೇಗೌಡ, ಪ್ರೊ.ಗಂಗಾಧರ್, ಪ್ರೊ.ಸಿ.ಬಿ. ಹೊನ್ನು ಸಿದ್ಧಾರ್ಥ ಇದ್ದರು.

SCROLL FOR NEXT