ಜಿಲ್ಲಾ ಸುದ್ದಿ

ತಾಲೂಕುಗಳಲ್ಲಿ ಶೀಘ್ರ ಡಯಾಲಿಸಿಸ್ ಕೇಂದ್ರ

Shilpa D

ಪ್ರತಿ ತಾಲೂಕಿನಲ್ಲೂ ಡಯಾಲಿಸೀಸ್ ಕೇಂದ್ರ ಸ್ಥಾಪಿಸುವ ಯೋಜನೆ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಈಗ ಡಯಾಲಿಸೀಸ್ ವ್ಯವಸ್ಥೆ ಇದೆ. ಆದರೆ, ಗ್ರಾಮೀಣ ಭಾಗದ ಜನರು ಜಿಲ್ಲಾ ಮಟ್ಟಕ್ಕೆ ಅಲೆಯುವುದು ಕಷ್ಟ. ಆದ್ದರಿಂದ ತಾಲೂಕು ಮಟ್ಟದಲ್ಲೇ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಆದರೆ ಸದ್ಯಕ್ಕೆ ಕಷ್ಟ ಸಾಧ್ಯವಾಗಿದ್ದರಿಂದ ಈಗ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪಿಪಿಪಿ ಮಾದರಿಯ ಡಯಾಲಿಸೀಸ್ ಕೇಂದ್ರಗಳನ್ನು ಮೊದಲು ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಿ ನಂತರ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತದೆ. ಹಾಗೆಯೇ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸುವ ಡಯಾಲಿಸೀಸ್ ಸೆಂಟರ್‍ಗಳಲ್ಲಿ ಡಯಾಲಿಸೀಸ್‍ಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ.

ಇದರಿಂದ ಚಿಕಿತ್ಸೆ ಮತ್ತು ಉದ್ಯೋಗ ಸೃಷ್ಟಿ ಎರಡೂ ಆಗುತ್ತದೆ. ಆದರೆ ತಾಲೂಕು ಕೇಂದ್ರಗಳಲ್ಲಿ ಬರುವ ಡಯಾಲಿಸೀಸ್ ಕೇಂದ್ರಗಳಲ್ಲಿ ರೋಗಿಗಳಿಂದ ಎಷ್ಟು ದರ ಪಡೆಯಬೇಕೆನ್ನುವುದನ್ನು ಸರ್ಕಾರ ನಿಗದಿ ಮಾಡಲಿದೆ. ಡಯಾಲಿಸೀಸ್ ಕೇಂದ್ರ ಆರಂಭಿಸಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಜಾಗ ನೀಡಲಿದೆ. ಅಗತ್ಯ ಯಂತ್ರೋಪಕರಣಗಳನ್ನು ಒದಗಿಸಲಿದೆ ಖಾದರ್ ಹೇಳಿದರು.

ಬೆಂಗಳೂರು ನಗರದಲ್ಲಿ ಆರೋಗ್ಯ ಇಲಾಖೆ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದ್ದರಿಂದ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಯೋಜನೆಯಲ್ಲಿ ಅನೇಕ ಕಡೆ ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

SCROLL FOR NEXT