ಬೆಂಗಳೂರು: ನೈಸ್ ಸಂಸ್ಥೆ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ವಿರುದ್ಧ ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಅಶೋಕ್ ಖೇಣಿ ಹಣ ತೋರಿಸಿ ಅವಮಾನಿಸಿದ ಘಟನೆ ನಡೆದಿದೆ.
ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿರುವ ನೈಸ್ ಸಂಸ್ಥೆ ಸರ್ಕಾರಕ್ಕೆ ರು.580 ಕೋಟಿ ವಂಚಿಸಿದ್ದು, ಈ ಹಣವನ್ನು ವಸೂಲಿ ಮಾಡುವಂತೆ ನೈಸ್ ಸದನ ಸಮಿತಿಯು ಸರ್ಕಾರಕ್ಕೆ ವರದಿ ನೀಡಿತ್ತು. ಈ ಸಂಬಂಧ ಉತ್ತರಿಸಲು ಮಂಗಳವಾರ ಸುದ್ದಿಗೋಷ್ಠಿ ಕರೆದಿದ್ದ ಅಶೋಕ್ ಖೇಣಿ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಹಣ ತೋರಿಸಿದರು.
ಸರ್ಕಾರಕ್ಕೆ ನೈಸ್ ಸಂಸ್ಥೆ ಕಟ್ಟಬೇಕಿರುವ ದಂಡದ ಹಣದ ಬಗ್ಗೆ ಪ್ರಶ್ನೆ ಎದುರಾದಾಗ ಅಸಹನೆಗೊಳಗಾದ ಶಾಸಕ ಖೇಣಿ, ತಮ್ಮ ಜೇಬಿನಿಂದ ಹಣದ ಕಂತೆ ತೆಗೆದು `ತೆಗೆದುಕೊಳ್ಳಿ, ನೀವೇ ತೆಗೆದುಕೊಂಡು ಹೋಗಿ ಈ ಹಣವನ್ನು ಸರ್ಕಾರಕ್ಕೆ ಕೊಟ್ಟುಬಿಡಿ' ಎಂದಿದ್ದಾರೆ.
ಈ ಮೂಲಕ ತಾವೊಬ್ಬ ಜವಾಬ್ದಾರಿಯುತ ಶಾಸಕ ಎಂಬದನ್ನೂ ಮರೆತು ವರ್ತಿಸಿದ್ದಾರೆ.
ನೈಸ್ ಸಂಸ್ಥೆಗೆ ರಸ್ತೆ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರ ನೀಡಿದ್ದ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆದಿತ್ತು. ಸಾಲದ್ದಕ್ಕೆ ರಸ್ತೆಗಳ ಗುಣಮಟ್ಟ ಸರಿಯಲ್ಲ ಮತ್ತು ಒಪ್ಪಂದಗಳನ್ನು ನೈಸ್ ಸಂಸ್ಥೆ ಉಲ್ಲಂಘಿಸಿದೆ ಎಂದು ಸದನದಲ್ಲಿ ವಿಷಯ ಪ್ರಸ್ತಾಪವಾಗಿತ್ತು.
ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ರಚನೆಯಾಗಿ ಸ್ಥಳ ಪರಿಶೀಲನೆಯೂ ನಡೆದಿತ್ತು. ಈ ವೇಳೆ, ಅಕ್ರಮವಾಗಿ 1.72 ಲಕ್ಷ ಮೆಟ್ರಿಕ್ ಟನ್ ಕಲ್ಲು ಗಣಿಗಾರಿಕೆ ನಡೆದಿದ್ದು, ಪ್ರತೀ ಟನ್ ಗೆ ರು.30 ನಂತೆ ಸರ್ಕಾರಕ್ಕೆ ಬರಬೇಕಿದ್ದ ರಾಜಧನ ಕೂಡಾ ಸಲ್ಲಿಕೆಯಾಗಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದ ಸದನ ಸಮಿತಿ, ನೈಸ್ ಸಂಸ್ಥೆಯಿಂದ ರು.580 ಕೋಟಿ ದಂಡ ವಸೂಲಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅಕ್ರಮ ಗಣಿಗಾರಿಕೆ ನಡೆಸಿಲ್ಲ ಎಂದು ಸಮರ್ಥಿಸಿಕೊಳ್ಳಲು ಖೇಣಿ ಸುದ್ದಿಗೋಷ್ಠಿಯಲ್ಲಿ ಕರೆದಿದ್ದರು.