ಬೆಂಗಳೂರು: ಮುಖ್ಯಕಾರ್ಯದರ್ಶಿ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಚಾರ ಈಗ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸೇವಾ ಹಿರಿತನ, ದಕ್ಷತೆ ಹಾಗೂ ಮುಂದೆ ಸೇವೆ ಸಲ್ಲಿಸಲು ಬಾಕಿ ಇರುವ ಅವಧಿ ಎಲ್ಲವನ್ನೂ ಪರಿಗಣಿಸಬೇಕಾಗಿರುವುದರಿಂದ ಸರ್ಕಾರದಲ್ಲೇ ಸಾಕಷ್ಟು ಗೊಂದಲಗಳಿವೆ.
ಈ ತಿಂಗಳ 31 ರಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನಿವೃತ್ತಿ ಆಗುತ್ತಿರುವುದರಿಂದ ಆ ಸ್ಥಾನಕ್ಕೆ ಈಗ ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳಿಂದ ಪ್ರಬಲ ಪೈಪೋಟಿ ಹಾಗೂ ಲಾಬಿ ಶುರುವಾಗಿದೆ. ವಾಣಿಜ್ಯಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿರುವ ಕೆ.ರತ್ನಪ್ರಭ (1981), ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಎಸ್.ಕೆ.ಪಟ್ಟಾನಾಯಕ್ (1982) ಹಾಗೂ ಮತ್ತೊಬ್ಬ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್ (1981) ಈ ಮೂವರ ನಡುವೆ ಪ್ರಬಲ ಪೈಪೋಟಿ ನಡೆದಿದೆ. ಜತೆಗೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಅರವಿಂದ್ ಜಾಧವ್ ಕೂಡ ಆಕಾಂಕ್ಷಿಯಾಗಿದ್ದಾರೆ.
ಕಳೆದ 3 ತಿಂಗಳ ಹಿಂದೆಯೇ ಕೌಶಿಕ್ ಮುಖರ್ಜಿ ನಿವೃತ್ಥಿ ಆಗಬೇಕಿತ್ತು. ಆದರೆ ಸರ್ಕಾರ ಅವರ ಸೇವಾವಧಿಯನ್ನು ವಿಸ್ತರಿಸಿತ್ತು. ಮುಂದಿನ ಮುಖ್ಯ ಕಾರ್ಯದರ್ಶಿಯನ್ನು ತೀರ್ಮಾನಿಸುವ ಅಧಿಕಾರವನ್ನು ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿಗೆ ನೀಡಿದೆ. ಈಗ ಮುಖ್ಯಮಂತ್ರಿ ಅವರು ಹಲವು ರೀತಿಯಿಂದ ಯೋಚಿಸುತ್ತಿದ್ದು ಆಯ್ಕೆ ಅಷ್ಟು ಸುಲಭವಾಗಿಲ್ಲ. ಒಂದೆಡೆ ದಲಿತ ಸಮುದಾಯಕ್ಕೆ ಸೇರಿದ ಕೆ. ರತ್ನ ಪ್ರಭ ಅವರನ್ನು ಮುಖ್ಯಕಾರ್ಯದರ್ಶಿ ಹುದ್ದೆಗೆ ನೇಮಿಸಬೇಕೆಂಬ ಒತ್ತಡವಿದೆ. ಮತ್ತೊಂದೆಡೆ ಕನ್ನಡಿಗರು ಹಾಗೂ ಲಿಂಗಾಯುತ ಜಾತಿಗೆ ಸೇರಿದ ವಿ.ಉಮೇಶ್ ಅವರನ್ನು ನೇಮಿಸಬೇಕೆಂದು ಸಮಾಜದ ವಿವಿಧ ಮುಖಂಡರು ಹಾಗೂ ಸಂಘ ಸಂಸ್ಥೆಗಳೂ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿವೆ.
ಹೊಂದಾಣಿಕೆ ಸ್ವಭಾವ
ರತ್ನ ಪ್ರಭ ಅವರು ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಅಪವಾದವಿದೆ. ಜತೆಗೆ ಕೆಲವು ಸಚಿವರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಉಮೇಶ್ ಹಾಗೂ ಪಟ್ಟಾನಾಯಕ್ ಹೊಂದಿಕೊಂಡು ಹೋಗುವ ಸ್ವಭಾವವುಳ್ಳವರು ಎಂದು ಹೇಳಲಾಗುತ್ತಿದೆ. ರತ್ನಪ್ರಭ ಹಾಗೂ ಪಟ್ಟಾನಾಯಕ್ ಅವರ ಸೇವಾವಧಿ ಕ್ರಮವಾಗಿ 2018ರ ಮಾರ್ಚಿ ಹಾಗೂ ಸೆಪ್ಟೆಂಬರ್ ವರೆಗೆ ಇದೆ. ಈಗ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವವರು. ಆದರೆ ಉಮೇಳ್ ಸೇವಾವಧಿ ಕೇವಲ 6 ತಿಂಗಳು ಮಾತ್ರ. ಹೀಗಾಗಿ ಅಲ್ಪ ಅವಧಿ ಇರುವ ಉಮೇಶ್
ಅವರನ್ನು ನೇಮಿಸಿದರೆ ಕನ್ನಡಿಗರು ಹಾಗೂ ಲಿಂಗಾಯತರಿಗೂ ಪ್ರಾತಿನಿಧ್ಯ ಕೊಟ್ಟಂತೆ ಆಗುತ್ತದೆ ಎಂಬ ಒಂದು ವಾದ ಸರ್ಕಾರದಲ್ಲಿ ನಡೆಯುತ್ತಿದೆ.
ಮತ್ತೊಂದೆಡೆ ಸೇವಾ ಹಿರಿತನ ಕಡೆಗಣಿಸುವುದು ಬೇಡ ಎಂಬ ವಾದ ಕೂಡ ಇದೆ. ಆದರೆ ಈ ಹಿಂದೆ 2009 ರಲ್ಲಿ ಎಸ್.ವಿ.ರಂಗನಾಥ್ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದಾಗಲೂ ಸೇವಾ ಹಿರಿತನವಿದ್ದ ಅಧಿಕಾರಿಗಳನ್ನು ಕಡೆಗಣಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ಹುದ್ದೆ ಸರ್ಕಾರದ ವಿವೇಚನೆ ಆಗಿರುವುದರಿಂದ ಸೇವಾ ಹಿರಿತನವುಳ್ಳ ಅಧಿಕಾರಿಗಳ ಪೈಕಿ ಯಾರನ್ನಾದರೂ ನೇಮಿಸಿ ಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಮುಂದಿನ ಮುಖ್ಯಕಾರ್ಯದರ್ಶಿ ಯಾರೆಂಬುದು ನಿರ್ಣಯ ಆಗಲಿದೆ.