ಜಿಲ್ಲಾ ಸುದ್ದಿ

110 ಹಳ್ಳಿಗಳಿಗೆ ಹರಿಯುತ್ತೆ ಉಳಿತಾಯವಾಗುವ ನೀರು

Manjula VN

ಬೆಂಗಳೂರು: ನಗರದಲ್ಲಿ ಸೋರಿಕೆಯಾಗುತ್ತಿದ್ದ ಕುಡಿಯುವ ನೀರಿನ ಮಟ್ಟವನ್ನು ತಗ್ಗಿಸಲಾಗಿದ್ದು, ಈ ಕ್ರಮದಿಂದ ಉಳಿತಾಯವಾದ ನೀರನ್ನು ಬೆಂಗಳೂರು ಗ್ರಾಮಾಂತರದ 110 ಹಳ್ಳಿಗಳಿಗೆ ಪೂರೈಸಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದೆ.

ಜಲಮಂಡಳಿಯ ಅಧ್ಯಕ್ಷರಾದ ಟಿ.ಎಂ. ವಿಜಯ್ ಭಾಸ್ಕರ್ ಅಧಿಕಾರ ವಹಿಸಿಕೊಂಡ ಬಳಿಕ ನೀರಿನ ಸೋರಿಕೆ, ಅನಧಿಕೃತ ಸಂಪರ್ಕ, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಪ್ರತಿನಿತ್ಯ ನಗರಕ್ಕೆ 135 ಕೋಟಿ ಲೀಟರ್ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಅದರಲ್ಲಿ  ಶೇ.48 ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಈ ಪ್ರಮಾದವನ್ನು ಪತ್ತೆ ಹಚ್ಚಿ, ಬಂದ್ ಮಾಡುವಲ್ಲಿ ಜಲಮಂಡಳಿಯ ಆಡಳಿತ ವರ್ಗ ಸಫಲವಾಗಿದೆ. ಸದ್ಯದ ಫಲಿತಾಂಶದಂತೆ ಶೇ.48 ರಿಂದ 43ಕ್ಕೆ ಇಳಿದಿದೆ.

ಜನವರಿಯೊಳಗೆ ಶೇ.30ಕ್ಕೆ ಇಳಿಸಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಸ್.ಕೃಷ್ಣಪ್ಪ ತಿಳಿಸಿದ್ದಾರೆ. ಈ 110 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆಗೆ ರು. 5,018 ಕೋಟಿ ವೆಚ್ಚವಾಗಲಿದ್ದು, ಈ ಸಾಲಕ್ಕಾಗಿ ಜಪಾನ್ ಅಂತಾರಾಷ್ಟ್ರೀ ಯ ಸಹಕಾರ ಸಂಸ್ಥೆಗೆ (ಜೈಕಾ) ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಯವರೆಗೆ ಸೋರಿಕೆಯಾಗುತ್ತಿದ್ದ ನೀರನ್ನೇ ಉಳಿಸಿ ಇತರೆಡೆ ಹಂಚಲು ತೀರ್ಮಾನಿಸಲಾಗಿದೆ. ಈ ಹಳ್ಳಿಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ ಜಲಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

SCROLL FOR NEXT