ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಮತ್ತು ಫ್ಲೆಕ್ಸ್ ಗಳ ಅಳವಡಿಕೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ತಪ್ಪಿತಸ್ಥರಿಂದ ದಂಡದ ರೂಪದಲ್ಲಿ ವಸೂಲಿ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಬನಶಂಕರಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಮನೋಹರ್ ಮತ್ತು
ನ್ಯಾ.ಬಿ.ವೀರಪ್ಪ ಅವರಿದ್ದ ರಜಾಕಾಲದ ನ್ಯಾಯಪೀಠ, ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಪಾಲಿಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬೇಜವಾಬ್ದಾರಿತನದಿಂದಾಗಿ ಒಟ್ಟು ಜಾಹೀರಾತು ತೆರಿಗೆ ಯಲ್ಲಿ ಕೇವಲ ಶೇ.1.5ರಷ್ಟು ಮಾತ್ರ ವಸೂಲಿ ಮಾಡಲಾಗುತ್ತಿದ್ದು, ನಗರದಲ್ಲಿ ಅಳವಡಿಸಿರುವ ಜಾಹೀರಾತುಗಳ ಬಾಡಿಗೆಯನ್ನು ಸೂಕ್ತ ರೀತಿಯಲ್ಲಿ ವಸೂಲಿ ಮಾಡದ ಪರಿಣಾಮ ಪಾಲಿಕೆಗೆ ಸುಮಾರು ರು.2 ಸಾವಿರ ಕೋಟಿ ನಷ್ಟವಾಗಿದೆ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ಮಥಾಯಿ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.
ನಗರದ ರಸ್ತೆಗಳ ಎರಡು ಬದಿ-ಯಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಈ ಜಾಹೀರಾತುದಾರರಿಂದ ತೆರಿಗೆ ವಸೂಲಿ ಮಾಡುವಲ್ಲಿ ವಲಯ ಮಟ್ಟದಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ. ಅನಧಿಕೃತ ಜಾಹೀರಾತು ಗಳಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯದ ಆದೇಶವಿದೆ. ಆದರೂ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಅಕ್ರಮ ಬೃಹತ್ ಮಟ್ಟದಲ್ಲಿ ನಡೆಯುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದ್ದಾರೆ.
ರಾಜಕೀಯ ಮುಖಂಡರ ಹುಟ್ಟುಹಬ್ಬ ಕಾರ್ಯಕ್ರಮಗಳಿಗೆ ಅಭಿನಂದನೆ ಸಲ್ಲಿಸುವ ಹಾಗೂ ಆಹ್ವಾನ ಕೋರುವ ಅಸಂಖ್ಯ ಜಾಹೀರಾತುಗಳು ರಸ್ತೆಯ ಎರಡೂ ಬದಿ ಎಗ್ಗಿಲ್ಲದೆ ಹಾಕುತ್ತಿರುವುದರಿಂದ ಬೆಂಗಳೂರು ನಗರದ ಅಂದಗೆಟ್ಟಿದೆ ಎಂದು ಅರ್ಜಿದಾರರು ದೂರಿದ್ದಾರೆ.
ವಾರದಲ್ಲಿ ಉತ್ತರಿಸಲು ನೋಟಿಸ್: ಈ ಮಧ್ಯೆ ಪಾಲಿಕೆಯಲ್ಲಿ ಉಪ ಆಯುಕ್ತರು (ಆಡಳಿತ) ಜಾಹೀರಾತು ವಿಭಾಗದ ಮುಖ್ಯಸ್ಥ ಮಥಾಯಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಐಎಎಸ್ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರ ಬಗ್ಗೆ ಪಾಲಿಕೆ ನೌಕರರ ಸಂಘ ದೂರು ಸಲ್ಲಿಸಿತ್ತು. ಈ ದೂರಿನ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿರುವ ಬಿಬಿಎಂಪಿ 7 ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.