ಜಿಲ್ಲಾ ಸುದ್ದಿ

ಪಾಸ್‍ಗೆ ಒಂದು ವರ್ಷ ಅವಧಿ ಕಡಿತ: ಬೆಂಗಳೂರು ವಿವಿ ಅಕಾಡೆಮಿಕ್ ಸಭೆಯಲ್ಲಿ ನಿರ್ಧಾರ

Shilpa D

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವ ವಿದ್ಯಾಲಯವು ಕಹಿ ಸುದ್ದಿ ನೀಡುತ್ತಿದೆ. ಬೆಂವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಪೂರ್ಣಗೊಳಿಸಲು ಇದುವರೆಗಿದ್ದ ಅವಧಿಗಿಂತ ಒಂದು ವರ್ಷ ಕಡಿತಗೊಳಿಸಿದೆ. ಪದವಿ ಶಿಕ್ಷಣಕ್ಕೆ ಮೂರು ವರ್ಷದ ಜೊತೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ಮೂರು ವರ್ಷ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಶಿಕ್ಷಣಕ್ಕೆ ನೀಡುತ್ತಿದ್ದ ದ್ವಿಗುಣ ಅವಧಿಯನ್ನು ಎರಡು ವರ್ಷಕ್ಕೆ ಕಡಿತಗೊಳಿಸಿ ಬೆಂವಿವಿ ಅಕಾಡೆಮಿಕ್ ಸಭೆ ನಿರ್ಣಯ ಕೈಗೊಂಡಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿರ್ದೇಶನದಂತೆ ಈ ನಿರ್ಣಯ ಕೈಗೊಳ್ಳಲಾಗಿದೆ. ದೇಶದ ಎಲ್ಲ ವಿವಿಗಳು ಏಕರೂಪದ ಶಿಕ್ಷಣ ನೀತಿ ಜಾರಿ ಉದ್ದೇಶದಿಂದ ಮತ್ತು ನಿಗದಿತ ಅವಧಿ ತೀರ್ಮಾನಕ್ಕೆ ಬದ್ಧವಾಗಿ ನಿರ್ಧರಿಸಲಾಗಿದೆ.

ಆರೋಗ್ಯ ಸಮಸ್ಯೆಯಿಂದ ಬಳಲುವ ಅಥವಾ ಬೇರೆಡೆ ಕೆಲಸ ಮಾಡಿಕೊಂಡು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚಿನ ಒಂದು ವರ್ಷ ಅವಕಾಶ ನೀಡಲಾಗುವುದು. ಹೆಚ್ಚಿನ ಸಮಯ ಪಡೆದು ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಅನರ್ಹರು ಎಂದರು.

ವೀಸಾ ಸಂಬಂಧಿತ ಸಮಸ್ಯೆ ಎದುರಿಸುತ್ತಿದ್ದ ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್, ವಿದೇಶಾಂಗ ಇಲಾಖೆ, ಎಂಎಚ್‍ಆರ್‍ಡಿ ಸೇರಿದಂತೆ ರಾಷ್ಟ್ರೀಯ ಸಂಸ್ಥೆಗಳಿಂದ ಶಿಫಾರಸು ಮಾಡಲ್ಪಟ್ಟ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಬೆಂವಿವಿಯಲ್ಲಿ ಪಿಎಚ್.ಡಿ ಸೀಟು ಪಡೆಯಲು ಪ್ರವೇಶ ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ತಿದ್ದುಪಡಿ ತರಲಾಗಿದೆ ಎಂದು ಪ್ರೊ.ಬಿ. ತಿಮ್ಮೇಗೌಡ ತಿಳಿಸಿದರು.

SCROLL FOR NEXT