ಜಿಲ್ಲಾ ಸುದ್ದಿ

ವಿಜ್ಞಾನ ಕ್ಷೇತ್ರ ವಿಕಾಸಕ್ಕೆ ಆದ್ಯತೆ: ಸಿಎಂ ಸಿದ್ದರಾಮಯ್ಯ

Shilpa D

ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಕ್ಷೇತ್ರದ ವಿಕಾಸಕ್ಕೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಮತ್ತೊಬ್ಬ ಶ್ರೇಷ್ಠ ಎಂಜಿನಿಯರ್ ನೋಡಲು ಸಾಧ್ಯವಾಗಿಲ್ಲ. ಪ್ರಶಸ್ತಿ ಪಡೆದವರು ಈ ಮಹಾನ್ ವಿಜ್ಞಾನಿ, ಎಂಜಿನಿಯರ್ ಅವರ ಮಾರ್ಗದಲ್ಲಿ ನಡೆದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ಸಂಶೋಧನೆಗಳು ನಡೆಯಲಿ: ಗುರಿ ಸಾಧನೆಗೆ ಪ್ರಯತ್ನಿಸಿದರೆ ಪ್ರಶಸ್ತಿಗಳು ತಾವಾಗಿಯೇ ಒಲಿದು ಬರಲಿವೆ. ಭಾರತ ಕೃಷಿ ಪ್ರಧಾನ ಮತ್ತು ಹಳ್ಳಿಗಳ ದೇಶವಾಗಿರುವ ಕಾರಣ ಕೃಷಿಕರ ಜೀವನ ಸುಧಾರಿಸಬೇಕು. ಇಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯಲು ಬೇಕಾಗುವ ಸಂಶೋಧನೆಗಳು ನಡೆಯಬೇಕಿದ್ದು, ಅವು ರೈತಾಪ  ವರ್ಗವನ್ನು ತಲುಪಬೇಕಿದೆ ಮತ್ತು ರೈತರು ಬೆಳೆಯುವ ಬೆಳೆ ಸಂಸ್ಕರಣೆ ಮತ್ತು ಮಾರುಕಟ್ಟೆ ದೊರೆಯಬೇಕಿದೆ ಎಂದು ತಿಳಿಸಿದರು. ಭಾರತರತ್ನ ಪುರಸ್ಕೃತ ವಿಜ್ಞಾನಿ. ಪ್ರೊ. ಸಿಎನ್‍ಆರ್ ರಾವ್ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ರಾಜ್ಯದಲ್ಲಿ ಸಿಗುವಷ್ಟು ಆದ್ಯತೆ ಮತ್ತೆಲ್ಲೂ ಸಿಗುತ್ತಿಲ್ಲ. ವಿಶ್ವಮಟ್ಟದಲ್ಲಿ ಬೆಳೆದ ವಿಜ್ಞಾನಿಗಳು ಬೆಂಗಳೂರು ವಿಜ್ಞಾನ ಕೇಂದ್ರದಲ್ಲಿ ವ್ಯಾಸಂಗ ಮಾಡಿರುವುದು ಹೆಮ್ಮೆಯ ವಿಷಯ. ಬೆಂಗಳೂರು ಮತ್ತು ಕರ್ನಾಟಕ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಕೀರ್ತಿ ಗಳಿಸಬೇಕಿದೆ ಎಂದರು.

ವಿಜ್ಞಾನ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿ: ಬೆಂಗಳೂರು ಐಟಿ ರಾಜಧಾನಿಗಿಂತ ವಿಜ್ಞಾನದ ರಾಜಧಾನಿ. ಶತಮಾನಗಳ ಹಿಂದೆಯೇ ವಿಜ್ಞಾನ ಸಂಸ್ಥೆಯು ಸ್ಥಾಪನೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಯಾವುದೇ ಕ್ಷೇತ್ರ ಪ್ರಗತಿ ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಅವಶ್ಯಕತೆ ಇದೆ. ಹಾಗೆಯೇ ದೇಶ ಮುಂದುವರಿಯಲು ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡಿದ ರಾವ್,ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದೇ ದೊಡ್ಡ ಪ್ರಶಸ್ತಿ ಇದ್ದಂತೆ. ಇದಕ್ಕಿಂತ ಪ್ರಶಸ್ತಿ ಬೇರೊಂದಿಲ್ಲ ಎಂದರು. ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ. ಅನುರಾಗ್ ಕುಮಾರ್ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು: ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಿಂದ ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್, ಡಾ. ವೀಣಾ ಪ್ರಸಾದ್, ಡಾ. ಬಿ. ವಿಶಾಲಾಕ್ಷಿ, ವಿಜ್ಞಾನ ಕ್ಷೇತ್ರದಿಂದ ಜಿಕೆವಿಕೆ ಗೌರವ ವಿಜ್ಞಾನಿ ಡಾ. ಮುನಿವೆಂಕಟಪ್ಪ ಸಂಜಪ್ಪ, ವಿಜಯನಗರ ವಿವಿಯ ಪ್ರೊ. ಕುಶಾಲ್ ಕಾಂತಿದಾಸ್, ಭೌತ ವಿಜ್ಞಾನ ಕ್ಷೇತ್ರದಿಂದ ಬೆಂವಿವಿ ಡಾ. ಬಸವರಾಜ ಅಂಗಡಿ, ರಸಾಯನ ವಿಜ್ಞಾನ ವಿಭಾಗದಿಂದ ಡಾ. ಕೆ.ಎಸ್. ಲೋಕೇಶ್, ವೈದ್ಯಕೀಯ ವಿಜ್ಞಾನದಿಂದ ಡಾ. ಎಸ್. ಚಂದ್ರಶೇಖರ್, ಜೀವ ವಿಜ್ಞಾನದಿಂದ ಡಾ. ಎಚ್.ಸಿ. ಶ್ರೀಹರ್ಷ, ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆಯಿಂದ ಡಾ. ಶಾಮರಾವ್ ಜಹಗೀರ್‍ದಾರ್, ಎಂಜಿನಿಯರಿಂಗ್ ವಿಜ್ಞಾದಿಂದ ಪ್ರೊ. ಶಾಲಭ್ ಭಟ್ನಾಕರ್, ಡಾ. ಪ್ರಶಾಂತ್‍ಕುಮಾರ್ ಪಾಂಡ, ಡಾ. ಜಿ.ಎಸ್. ದ್ವಾರಕೀಶ್, ಪ್ರೊ ಕೆ.ಆರ್. ಶ್ರೀನಿವಾಸ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

SCROLL FOR NEXT