ಬೆಂಗಳೂರು: ಇಂಟರ್ನೆಟ್‍ನಿಂದ ಯುವತಿಯರ ಅಶ್ಲೀಲ ಫೋಟೊ ಡೌನ್‍ಲೋಡ್ ಮಾಡಿ ಅವರನ್ನು ವೇಶ್ಯೆಯರೆಂದು ಬಿಂಬಿಸಿ ಇಂಟರ್ನೆಟ್‍ನಲ್ಲೇ ಜಾಹೀರಾತು ನೀಡಿ ಗ್ರಾಹಕರ ಸೆಳೆದು ಅವರನ್ನು ದೋಚುತ್ತಿದ್ದ ಐವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಪೇಟೆ ತಾಲೂಕಿನ ಅಬ್ದುಲ್ ಕರೀಮ್(28), ಮಹಮ್ಮದ್ ಸಲೀಂ(27), ಅಬ್ಬಾಸ್(31), ನಾಪೋಕ್ಲು ಗ್ರಾಮದ ಸೈನುದ್ದೀನ್(24), ಸಮೀರ್ (25) ಬಂಧಿತರು.
ಅಂತಾರಾಷ್ಟ್ರೀಯ ಪ್ರದರ್ಶನ ಮೇಳಗಳಲ್ಲಿ ಮಳಿಗೆಗಳನ್ನು ನಡೆಸುತ್ತಿದ್ದ ಸಬೀನ್ ಸಲೀಂ ಎಂಬಾತ ಗ್ರಾಹಕನಂತೆ ಇವರನ್ನು ಸಂಪರ್ಕಿಸಿದ್ದ. ಆತನನ್ನು ಅಪಹರಿಸಿದ ಬಂಧಿತರು ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದರು.
ಪ್ರಕರಣದ ವಿವರ
ಇಂಟರ್ನೆಟ್‍ನಲ್ಲಿ ಯುವತಿಯರ ಅಶ್ಲೀಲ ಫೋಟೊಗಳನ್ನು ಆರೋಪಿಗಳು ಡೌನ್‍ಲೋಡ್ ಮಾಡಿ ಕೊಳ್ಳುತ್ತಿದ್ದರು. ಅವರನ್ನು ವೇಶ್ಯೆಯರೆಂದು ಬಿಂಬಿಸಿ ದೂರವಾಣಿ ಸಂಖ್ಯೆ ನೀಡಿ ವೆಬ್‍ಸೈಟ್‍ಗಳಲ್ಲಿ ಪಾಪ್ ಅಪ್ ಮೂಲಕ ಜಾಹೀರಾತು ನೀಡುತ್ತಿದ್ದರು. ಯಾರಾದರೂ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿದರೆ ಆರೋಪಿಗಳು ಮಾತನಾಡಿ ಹುಡುಗಿಯರ ಸರಬರಾಜು ಮಾಡುವುದಾಗಿ ಹೇಳುತ್ತಿದ್ದರು.
ಅದರಂತೆ ನಗರದ ಸಬೀನ್ ಸಲೀಂ ಎಂಬಾತ ಇವರನ್ನು ಸಂಪರ್ಕಿಸಿದ್ದ. ಹುಡುಗಿಯರನ್ನು ತೋರಿಸುವುದಾಗಿ ಹೇಳಿ ಆತನನ್ನು ಎಲೆಕ್ಟ್ರಾನಿಕ್ ಸಿಟಿ ಎಚ್.ಪಿ.ಗೇಟ್ ಬಳಿಯಿಂದ ಕಾರಿನಲ್ಲಿ ಕರೆದೊಯ್ದರು. ನೈಸ್ ರಸ್ತೆ ತಲುಪುತ್ತಿದ್ದಂತೆ ಒಬ್ಬ, ನಾವು ಪೊಲೀಸರು. ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿನ್ನ ಬಗ್ಗೆ ಅನುಮಾನ ಇದೆ. ಹೀಗಾಗಿ, ಠಾಣೆಗೆ ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದ. ಈ ವೇಳೆ ಸಬೀನ್, ತಾನು ತಪ್ಪು ಮಾಡಿಲ್ಲ ಬಿಟ್ಟು ಬಿಡಿ ಎಂದಿದ್ದಾನೆ. ಆಗ, ಚಾಕುವಿನಿಂದ ಬೆದರಿಸಿ ಕೈಗಡಿಯಾರ, ಮೊಬೈಲ್ ಫೋನ್, ರು.10 ಸಾವಿರ ನಗದು ಕಿತ್ತುಕೊಂಡಿದ್ದರು.
ಬಳಿಕ ಆತನ ಎಟಿಎಂ ಕಾರ್ಡ್ ಹಾಗೂ ಪಿನ್ ಸಂಖ್ಯೆ ತಿಳಿದುಕೊಂಡು ಮೈಸೂರು ರಸ್ತೆಯಲ್ಲಿ ನೈಸ್ ರಸ್ತೆ ಸಮೀಪ ಮತ್ತು ರಾಮನಗರದ ಬಸ್ ನಿಲ್ದಾಣದ ಬಳಿ 2 ಎಟಿಎಂಗಳಿಂದ ರು.87 ಸಾವಿರ ಡ್ರಾ ಮಾಡಿಕೊಂಡಿದ್ದರು. ಸಬೀನ್‍ನನ್ನು ಮಂಡ್ಯ ಬಸ್ ನಿಲ್ದಾಣದ ಬಳಿ ರಾತ್ರಿ 2 ಗಂಟೆಗೆ ಕಾರಿನಿಂದ ಇಳಿಸಿ ಪರಾರಿಯಾಗಿದ್ದರು. ಈ ಸಂಬಂಧ ಸಬೀನ್ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದರು.