ಗದಗ: ಮಾರಕ ಎಚ್1ಎನ್1ಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಗಂಗಾಧರಯ್ಯ ಹಿರೇಮಠ್ ಎಂಬುವವರು ಗದಗದಲ್ಲಿ ಮೃತಪಟ್ಟಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಅಸುಂಡಿಯವರಾದ ಗಂಗಾಧರಯ್ಯ ಅವರು ಕಳೆದ ಹಲವು ದಿನಗಳಿಂದ ತೀವ್ರ ಜ್ವರ, ನೆಗಡಿ ಮತ್ತು ಗಂಟಲು ಬೇನೆಯಿಂದ ಬಳಲುತಿದ್ದರು. ಹೀಗಾಗಿ ಅವರನ್ನು ಕಳೆದ ಜನವರಿ 25ರಂದು ಗದಗ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನು ಮತ್ತೆ ಜನವರಿ 27ರಂದು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಂಗಾಧರಯ್ಯ ಸಾವನ್ನಪ್ಪಿದ್ದರು.
ತುರ್ತು ವಿಡಿಯೋ ಕಾನ್ಫರೆನ್ಸ್
ರಾಜ್ಯದಲ್ಲಿ ಮಾರಕವಾಗುತ್ತಿರುವ ಎಚ್1ಎನ್ ಅನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಮುಖ್ಯಾಧಿಕಾರಿಗಳು, ಕೆಸಿ ಜನರಲ್ ಆಸ್ಪತ್ರೆಯ ಅಧೀಕ್ಷಕರು, ಜಿಲ್ಲಾ ಸಾಂಕ್ರಾಮಿಕ ರೋಗಗಳ ಅಧೀಕ್ಷಕರು ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.
ಇದಲ್ಲದೆ 30 ಜಿಲ್ಲೆಯ ಜಿಲ್ಲಾ ವೈಧ್ಯಕೀಯ ಅಧೀಕ್ಷಕರು, ಜಿಲ್ಲಾ ಸರ್ಜನ್‌ಗಳು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ರೋಗವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಔಷಧ ಸಂಗ್ರಹಗಳು, ಇನ್ನಿತರೆ ಕ್ರಮಗಳ ಕುರಿತು 30 ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ.
ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ: ಯುಟಿಖಾದರ್
ಇದೇ ವೇಳೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಎಚ್1ಎನ್1 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ಯುಟಿ ಖಾದರ್ ಅವರು, ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 106 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಹರಡದಂತೆ ತಡೆಯಲು ಆಸ್ಪತ್ರೆಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.