ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ನೀಡುತ್ತೀರೋ ಇಲ್ಲವೋ? ಅಸ್ತಿತ್ವದಲ್ಲಿರುವ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದರಿಂದ ಐದನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸುವುದಕ್ಕೆ ಸರ್ಕಾರ ಅನುಮತಿ ನೀಡದಿರಲು ಕಾರಣವಾದರೂ ಏನು? ಈ ಕುರಿತು ನಿಲುವನ್ನು ಸ್ಪಷ್ಟಪಡಿಸಿ ಎಂದು ಹೈಕೋರ್ಟ್ ಗುರುವಾರ ಸರ್ಕಾರಕ್ಕೆ
ತಾಕೀತು ಮಾಡಿದೆ.
ಹೊಸದಾಗಿ ಆರಂಭ ವಾಗುವ ಶಾಲೆಗಳಲ್ಲಿ 1-5 ನೇ ತರಗತಿವರೆಗೆ ಕಡ್ಡಾಯ ವಾಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಯೋಜನಾ ಸಂಸ್ಥೆ (ಕೆಎಎಂಎಸ್) ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರ ಪೀಠ, ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಏಕೆ ಪಾಲಿಸುತ್ತಿಲ್ಲ? ನೀವು ಈ ನೆಲದ ಕಾನೂನನ್ನು ಗೌರವಿಸಬೇಕಲ್ಲವೇ? ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಲಿಲ್ಲ ಎಂದರೆ ಅದರ ತೀರ್ಪಿಗೆ ನೀಡಿದ ಗೌರವ ವಾದರೂ ಏನು? ಸಂವಿಧಾನದ ಅನುಚ್ಛೇದ 141ಕ್ಕೆ (ಸುಪ್ರೀಂಕೋರ್ಟ್ ತೀರ್ಪಿಗೆ ಅಧೀನ ನ್ಯಾಯಾಲಯ ಗಳು ಬದ್ಧವಾಗಿರುವುದು) ಸರ್ಕಾರ ಬದ್ಧ ವಾಗಿರಬೇಕು ಎಂದು ಪೀಠ ಸರ್ಕಾರದ ಕಿವಿ ಹಿಂಡಿದೆ. ಸಂವಿಧಾನದ ಪ್ರಕಾರ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವುದು ಮಕ್ಕಳ ಹಾಗೂ ಪಾಲಕರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಂವಿಧಾನದ 141ನೇ ವಿಧಿ ಅನ್ವಯ ಸುಪ್ರಿಂಕೋರ್ಟ್ ಆದೇಶವನ್ನು ದೇಶದ ಎಲ್ಲಾ ರಾಜ್ಯಗಳು ಪಾಲಿಸಬೇಕು. ಆದರೆ, ಭಾಷಾ ಮಾಧ್ಯಮ
ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಏಕೆ ಪಾಲಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಮಾತ್ರವಲ್ಲದೇ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಆಂಗ್ಲ ಶಾಲೆಗಳ ಆರಂಭಕ್ಕೆಅನುಮತಿ ನೀಡದೆ ವಿವಿಧ ಷರತ್ತುಗಳನ್ನು ವಿಧಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಕ್ರಮಕ್ಕೆ ಪೀಠ ಇದೇ ವೇಳೆ ಬೇಸರ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ವಕೀಲರು, ಹೊಸ ಶಾಲೆಗಳನ್ನು ಆರಂಬಿsಸುವುದರ ಹಿಂದೆ ಮೂಲಸೌಕರ್ಯದ ಪ್ರಶ್ನೆಯೂ ಅಡಗಿದೆ ಎಂದು ಸಬೂಬು ನೀಡಲು ಮುಂದಾದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳ ತರಗತಿಗಳು ಒಂದೇಯಾಗಿದ್ದು, ಮೂಲಸೌಕರ್ಯಕ್ಕೂ ಮತ್ತು ಮಾಧ್ಯಮ ವಿಷಯಕ್ಕೂ ಸಂಬಂಧವೇ ಇಲ್ಲ. ಕೇವಲ ಬೋಧನೆ ಮಾಧ್ಯಮವಷ್ಟೇ ಬೇರೆಯಾಗಿರುತ್ತದೆ.
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಲಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಮಾತ್ರ ಸರ್ಕಾರ ಸ್ಪಷ್ಟಪಡಿಸಬೇಕು. ಆದ್ದರಿಂದ ಮುಂದಿನ ವಿಚಾರಣೆ ವೇಳೆ ಈ ಕುರಿತು ನಿಲುವು ತಿಳಿಸಿ ಎಂದು ಸೂಚಿಸಿದ ಪೀಠ ವಿಚಾರಣೆ ಮುಂದೂಡಿತು.