ಬೆಂಗಳೂರು: ಪ್ರೀತಿಸು ಎಂದು ಯುವತಿಯ ಪ್ರಾಣ ತಿಂದ ಯುವಕನೊಬ್ಬ ಆಕೆ ಒಪ್ಪದಿದ್ದಾಗ ಕಾಲೇಜಿನ ಲೈಬ್ರರಿಯಲ್ಲೇ ಚಾಕುವಿನಿಂದ ತಿವಿದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆರೆಟೆನ ಅಗ್ರಹಾರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹಿತೈಶಿ(19) ಗಾಯಗೊಂಡವರು. ಈಕೆಯನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶ್ಯಾಂತ್(19) ಎಂಬಾತ ನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಪಶ್ಚಿಮ ಬಂಗಾಳ ಮೂಲದ ಹಿತೈಶಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾಳೆ. ಅದೇ ವಿಭಾಗದಲ್ಲಿ ಪಶ್ಚಿಮ ಬಂಗಾಳ ಮೂಲದ ಶ್ಯಾಂತ್ ಕೂಡಾ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ನಾಲ್ಕೈದು ತಿಂಗಳಿಂದ ಶ್ಯಾಂತ್, ಹಿತೈಶಿಯನ್ನು ಪ್ರೀತಿಸುತ್ತಿದ್ದ. ಆದರೆ, ಹಿತೈಶಿಗೆ ಅದು ಇಷ್ಟವಿರದ ಕಾರಣ ನಿರಾಕರಿಸಿದ್ದಳು. ಆದರೂ, ಹಲವು ತಿಂಗಳು ಹಿತೈಶಿಯ ಬೆನ್ನು ಬಿದ್ದ ಆರೋಪಿ, ಕೊನೆಗೆ ಆಕೆಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ.
ಇದರಿಂದ ಬೇಸರಗೊಂಡ ಹಿತೈಶಿ, ವಿಚಾರವನ್ನು ಪಾಲಕರಿಗೆ ತಿಳಿಸಿದ್ದಳು. ಹೀಗಾಗಿ, ಯುವಕ-ಯುವತಿಯ ಪಾಲಕರು 15 ದಿನಗಳ ಹಿಂದಷ್ಟೇ ಭೇಟಿ ಮಾಡಿ ಒಬ್ಬರ ತಂಟೆಗೆ ಮತ್ತೊಬ್ಬರು ಬರಬಾರದು ಎಂದು ಮಾತುಕತೆ ಆಗಿತ್ತು. ಆದರೂ, ಸುಮ್ಮನಾಗದ ಆರೋಪಿ ಹಿತೈಶಿಯ ಬೆನ್ನು ಬಿಟ್ಟಿರಲಿಲ್ಲ. ಶುಕ್ರವಾರ ಮಧ್ಯಾಹ್ನ ಲೈಬ್ರರಿಯಲ್ಲಿ ಹಿತೈಶಿ ಕುಳಿತಿದ್ದಾಗ ಆರೋಪಿ ಆಗಮಿಸಿದ್ದ. ಪ್ರೀತಿ ವಿಚಾರದಲ್ಲಿ ಮತ್ತೆ ಪೀಡಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಆಗ, ಚಾಕು ತೆಗೆದು ನನಗೆ ಸಿಗದ ನೀನು, ಬೇರೆಯವರಿಗೂ ಸಿಗಬಾರದೆಂದು ಕಿಬ್ಬೊಟ್ಟೆಗೆ ಮೂರ್ನಾಲ್ಕು ಬಾರಿ ತಿವಿದಿದ್ದಾನೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೂಡಲೇ ಹಿತೈಶಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.