ಬೆಂಗಳೂರು: ಭಾರತ 21ನೇ ಶತಮಾನದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ದೇಶದಲ್ಲಿ ಮಹಿಳಾ ಸಶಕ್ತೀರಣದ ಅಗತ್ಯವಿದೆ ಎಂದು ರಾಜ್ಯಪಾಲ ವಿ.ಆರ್ ವಾಲಾ ಅವರು ಹೇಳಿದ್ದಾರೆ.
ಭಾನುವಾರ 'ಅದಮ್ಯ ಚೇತನ ಸೇವಾ' ಉತ್ಸವದಲ್ಲಿ 170 ಮಹಿಳಾ ವಿಜ್ಞಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ದೇಶದ ಅಬಿವೃದ್ಧಿಗಾಗಿ ಸ್ತ್ರೀಶಕ್ತಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಹಿಳಾ ಶಕ್ತಿಯ ಸಬಲೀಕರಣಕ್ಕೆ ಒತ್ತು ನೀಡಬೇಕು. ಶೇ.85 ರಷ್ಟು ಪುರುಷರು ಶಿಸ್ತನ್ನು ಉಲ್ಲಂಘಿಸುತ್ತಾರೆ. ನಾರಿಯರು ಶಿಸ್ತಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಯಾವುದೇ ಸಂಸ್ಥೆ ಉನ್ನತೀಕರಣದತ್ತ ಸಾಗಬೇಕೆಂದರೆ ಮಾತೃ ಶಕ್ತಿಯನ್ನು ಬಳಸಿಕೊಳ್ಳಬೇಕು. ಮಹಿಳೆಯರಲ್ಲಿ ಬುದ್ಧಿಮತ್ತೆಗೇನೂ ಕೊರತೆ ಇಲ್ಲ. ಆದರೆ, ಅದನ್ನು ಪ್ರೋತ್ಸಾಹಿಸಿ ಬಳಸಿಕೊಳ್ಳಬೇಕಿರುವ ಕೆಲಸವಾಗಬೇಕಿದೆ. ಈಗಾಗಲೇ ಅವರು ಚಂದ್ರಯಾನ, ಮಂಗಳಯಾನ, ರೇಡಾರ್ ತಯಾರಿಕೆಯಲ್ಲಿ ತಮ್ಮ ತಾಂತ್ರಿಕ ಸಾಮರ್ಥ್ಯ ತೋರಿಸಿ ಯಶ ಕಂಡಿದ್ದಾರೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಎಡಿಎ, ಇಸ್ರೋ, ಡಿಆರ್ಡಿಒ ಹಾಗೂ ಎನ್ಎಎಲ್ ಮತ್ತಿತರ ಸಂಸ್ಥೆಗಳ ಮಹಿಳಾ ವಿಜ್ಞಾನಿಗಳನ್ನು ಸನ್ಮಾನಿಸಲಾಯಿತು. ಕೇಂದ್ರ ಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯೆ ತಾರಾ, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತ್ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.