ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆ ಬದಲಾವಣೆಗೆ ಮುಂದಾಗಿರುವ ಪ್ರೌಢ ಶಿಕ್ಷಣ ಮಂಡಳಿ, ಶ್ರೇಣಿ ವ್ಯವಸ್ಥೆಯನ್ನು ಜಾರಿಗೊಳಿಸಿ ಅನುತ್ತೀರ್ಣ ಎಂಬ ಶಬ್ದವನ್ನು ತೆಗೆದು ಹಾಕಲು ನಿರ್ಧರಿಸಿದೆ.
ಇದರ ಜತೆಗೆ ಪ್ರತಿ ಶ್ರೇಣಿಗೂ ಒಂದು ಅಂಕ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ನೂತನ ವ್ಯವಸ್ಥೆ ಜಾರಿಗೆ ಬರಲಿದ್ದು, ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ನಮೂದಿಸುವ ಬದಲು ನಾಟ್ ಕಂಪ್ಲೀಟೆಡ್ (ಎನ್‌ಸಿ) ಎಂದು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಧನಾತ್ಮಕ ವಿಚಾರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಬದಲಾವಣೆ ತರಲಾಗುತ್ತಿದೆ. ಶ್ರೇಣಿ ವ್ಯವಸ್ಥೆಯಲ್ಲಿ ಕೆಲ ತಾಂತ್ರಿತ ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ ಒಂದು ಅಂಕ ಹೆಚ್ಚಿಸಲಾಗುತ್ತಿದೆ. ಮತ್ತೊಂದು ಮಹತ್ವದ ವಿಚಾರವೆಂದರೆ ಆಂತರಿಕ ಮೌಲ್ಯ ಮಾಪನಕ್ಕೆ ಕನಿಷ್ಠ ಅಂತ ನಿಗದಿ ಮಾಡಲಾಗಿಲ್ಲ. ಇದರಿಂದ ಉತ್ತೀರ್ಣತೆಗೆ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ 30 ಅಂಕ ಗಳಿಸಿದರೆ ಸಾಕಾಗುತ್ತದೆ. ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿಯೂ 30, ಒಟ್ಟಾರೆ ಶೇ. 35ರಷ್ಟು ಅಂಕ ಗಳಿಸಿರಬೇಕು. ಹೊಸ ಶ್ರೇಣಿ ವ್ಯವಸ್ಥೆ ಪ್ರಕಾರ, ಉತ್ತೀರ್ಣರಾಗಲು 625 ಅಂಕಗಳಿಗೆ 219 ಅಂಕ ಪಡೆದವರಿಗೆ ಸಿ ಶ್ರೇಣಿ ನೀಡಲಾಗುತ್ತದೆ.