ಬೆಂಗಳೂರು: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ ಸರಗಳ್ಳನೊಬ್ಬ ತಾನು ಧರಿಸಿದ್ದ ಅಂಗಿಯನ್ನು ಕಳಚಿ ಪರಾರಿಯಾಗಿರುವ ಹಾಸ್ಯಾಸ್ಪದ ಪ್ರಕರಣ ನಗರದ ಹೊಸಕೆರೆಹಳ್ಳಿಯಲ್ಲಿ ನಡೆದಿದೆ.
ಹೌದು, ಸರಗಳ್ಳ ಇನ್ನೇನು ಸಿಕ್ಕಿಯೇ ಬಿಟ್ಟ. ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದರಿಂದ ಆತನನ್ನು ಹಿಡಿಯಲು ಮುಂದಾದ ಜನರು ಪೆಚ್ಚುಮೋರೆ ಹಾಕಿಕೊಂಡು ಬರಿಗೈಲಿ ಹಿಂತಿರುಗಿದ್ದಾರೆ.
ಏನಿದು ಘಟನೆ: ಸರ ಅಪಹರಣಕ್ಕೆ ಹೊಂಚು ಹಾಕಿ, ಪಲ್ಸರ್ ಬೈಕ್ ಏರಿ ಹೊರಟ್ಟಿದ್ದ ಸರಗಳ್ಳನೋರ್ವನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಈ ವೇಳೆ ಪೊಲೀಸರು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಅರಿತ ಕಳ್ಳ ಬೈಕ್ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಬೈಕ್ ಬಿಟ್ಟು ಪೊಲೀಸರ ಕೈಯಿಂದ ಪರಾರಿಯಾಗುತ್ತಿದ್ದ ಕಳ್ಳನನ್ನು ಗುರುತಿಸಿದ ಸ್ಥಳೀಯರು ಆತನನ್ನು ಹಿಡಿದುಕೊಂಡಿದ್ದಾರೆ. ಇನ್ನೇನು ಕಳ್ಳ ಸಿಕ್ಕಿಯೇ ಬಿಟ್ಟ ಎಂದು ಖುಷಿಯಲ್ಲಿದ್ದರು. ಆದರೆ, ಪೊಲೀಸರು ಹತ್ತಿರ ಬರುತ್ತಿದ್ದಂತೆ ಆ ಕಳ್ಳ ತನ್ನ ಶರ್ಟ್ ಕಳಚಿ ಸಾರ್ವಜನಿಕರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಪೊಲೀಸರು ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗಿದ್ದಾರೆ. ಪರಾರಿಯಾದವನು ಹಳೇ ಸರಗಳ್ಳನಾಗಿದ್ದು, ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ. ಅದನ್ನು ಅರಿತ ಪೊಲೀಸರು ಆತನನ್ನು ಬೆನ್ನಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಟಾರ್ಗೆಟ್: ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಗಳು ಪೊಲೀಸ್ ಹಾಗೂ ಸಾರ್ವಜನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಕಳ್ಳ ಮುಂಜಾನೆ ವಾಯುವಿಹಾರ ಮಾಡುವವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಲ್ಲದೆ ಈಗ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸರು ಮುಂಜಾನೆ ಗಸ್ತು ಹೆಚ್ಚಿಸಿ ಎಲ್ಲೆಡೆ ನಿಗಾ ವಹಿಸಲಾಗಿದೆ.
ಅದೇ ರೀತಿ ದಕ್ಷಿಣ ವಿಭಾಗದಲ್ಲಿ ಬೆಳಗ್ಗೆ ಗಸ್ತಿನಲ್ಲಿದ್ದ ಪೊಲೀಸರಿಗೆ 7 ಗಂಟೆ ಸುಮಾರಿನಲ್ಲಿ ಗಿರಿನಗರ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿ ದೇಗುಲ ಬಳಿ ಹಳೇ ಸರಗಳ್ಳ ಬೈಕ್‍ನಲ್ಲಿ ಹೋಗುತ್ತಿದ್ದುದು ಕಂಡಿದೆ. ಪೊಲೀಸರು ಮಾಹಿತಿ ಪಡೆದ ತಕ್ಷಣ ಚೀತಾವಾಹನದಲ್ಲಿ ಆತನ ಬೆನ್ನಟ್ಟಿದ್ದಾರೆ. ಪೊಲೀಸರು ಬೆನ್ನತ್ತಿರುವುದನ್ನು ಅರಿತ ಸರಗಳ್ಳ ತಾನು ಸವಾರಿ ಮಾಡುತ್ತಿದ್ದ ಬೈಕ್ ಪರಾರಿಯಾಗಲು ಯತ್ನಿಸಿದ್ದಾನೆ. ಕಳ್ಳ-ಪೊಲೀಸ್‍ರನ್ನು ಕಂಡ ಸಾರ್ವಜನಿಕರು ಕೂಡಲೇ ಸರಗಳ್ಳನನ್ನು ಬೆನ್ನತ್ತಿ ಹಿಡಿದಿದ್ದಾರೆ. ಆದರೆ ಆತನನ್ನು ಕೊರಳಪಟ್ಟಿ ಹಿಡಿದು ಪೊಲೀಸರ ಹತ್ತಿರ ಕರೆದು ಹೋಗುವ ಹೊತ್ತಿಗೆ ಸರಗಳ್ಳ ತಾನು ಧರಿಸಿದ್ದ ಅಂಗಿಯನ್ನು ಕಳಚಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಶ್ಲಾಘನೀಯ
ಘಟನೆ ನಡೆದ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‍ಕುಮಾರ್ ಆಗಮಿಸಿ ಪರಿಶೀಲಿಸಿ ಸರಗಳ್ಳನನ್ನು ಹಿಡಿಯಲು ಮುಂದಾಗಿದ್ದ ಸಾರ್ವಜನಿಕರನ್ನು ಶ್ಲಾಘಿಸಿದರು. ಸಾರ್ವಜನಿಕರು ಸರಗಳ್ಳನಿಂದ ಮೊಬೈಲ್ ಫೋನ್‍ವೊಂದನ್ನು ವಶಪಡಿಸಿಕೊಂಡಿದ್ದು ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಪೊಲೀಸರು ಸರಗಳ್ಳನ ಬೈಕ್ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದು ಸರಗಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿಸಿದ್ದಾರೆ.