ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಲಂಚ ಹಗರಣದ ಪೊಲೀಸ್ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ಅನ್ವಯವಾಗುವುದಿಲ್ಲ. ಹೀಗಾಗಿ, ಈ ಬಗ್ಗೆ ಸೋನಿಯಾ ನಾರಂಗ್ ಅವರು ತನಿಖೆ ಮುಂದುವರೆಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಉಪ ಲೋಕಾಯುಕ್ತರು ನೀಡಿದ ಆದೇಶಕ್ಕೆ ಮಾತ್ರ. ಹೀಗಾಗಿ, ಸಾಮಾನ್ಯ ಪೊಲೀಸ್ ಠಾಣೆಗಳಂತೆ ಲೋಕಾಯುಕ್ತ ಠಾಣೆಯೂ ಇರುವುದರಿಂದ ಅಲ್ಲಿ ದಾಖಲಾಗಿರುವ ಎಫ್ಐಆರ್ ಸಂಬಂಧ ತನಿಖೆ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದರು.
ಭ್ರಷ್ಟಾಚಾರ ಅಥವಾ ಅದಕ್ಕೆ ಸಂಬಂಧಿಸಿದ ಲಿಖಿತ ದೂರುಗಳು ಬಂದಾಗ ಎಫ್ಐಆರ್ ದಾಖಲಿಸಿ ಅವರು ತನಿಖೆ ಮಾಡುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹೊಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಾಖಲಾಗದೆ ಇರುವ, ಲಿಖಿತ ದೂರು ಬಾರದೆ ಇರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸರ್ಕಾರಕ್ಕೆ ಪತ್ರ ಬರೆಯಲಾಗದು. ಯಾವ ಆಧಾರದ ಮೇಲೆ ಸರ್ಕಾರಕ್ಕೆ ಅವರು ಪತ್ರ ಬರೆದರು? ಹಾಗೇ, ಸರ್ಕಾರವೂ ಯಾವ ಆಧಾರದ ಮೇಲೆ ಅದನ್ನು ಎಸ್‍ಐಟಿಗೆ ವಹಿಸಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ನ್ಯಾ.ಚಂದ್ರಶೇಖರ್ ಹೇಳಿದರು.
ಸಿಬಿಐಗೆ ಒಪ್ಪಿಸಬಹುದು
ಈ ಪ್ರಕರಣವನ್ನು ಸಿಬಿಐಗೆ ವಹಿಸಲು ತಮಗೆ ಅಧಿಕಾರವಿಲ್ಲ ಎಂದು ಸರ್ಕಾರ ಹೇಳುತ್ತಿರುವುದು ಸೂಕ್ತವಲ್ಲ. ಏಕೆಂದರೆ, ಲಿಖಿತ ದೂರಿನ ಆಧಾರದ ಮೇಲೆ ಲೋಕಾಯುಕ್ತ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ, ಅದನ್ನು ಸಿಬಿಐಗೆ ವರ್ಗಾಯಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದರು.