ಜಿಲ್ಲಾ ಸುದ್ದಿ

ಕೃಪಾ ಅಮರ್ ಆಳ್ವ ಅಧಿಕಾರ ಸ್ವೀಕಾರ

Sumana Upadhyaya

ಬೆಂಗಳೂರು: ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಾಗಿ ಡಾ. ಕೃಪಾ ಅಮರ್ ಆಳ್ವ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ನೃಪತುಂಗ ರಸ್ತೆ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಆಯೋಗದ ಕಚೇರಿಯಲ್ಲಿ ಅಭಿಮಾನಿಗಳು ಹಿತೈಷಿಗಳ ಸಮ್ಮುಖದಲ್ಲಿ ಪದಗ್ರಹಣ ಮಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯೋಗ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಆರ್ ಟಿಇಗೆ ಸಂಬಂಧಿಸಿದಂತೆ 53 ದೂರುಗಳು ಆಯೋಗದ ಮುಂದಿವೆ. ಇವನ್ನು ಗಂಭೀರವಾಗಿ ಪರಿಗಣಿಸುವುದಲ್ಲದೆ, ಆರ್ ಟಿಇ ಶೇ 100ರಷ್ಟು ಅನುಷ್ಠಾನಕ್ಕೆ ವಿಶೇಷ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಶಾಲಾ ಹಂತದಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪಠ್ಯದಲ್ಲಿ ನೈತಿಕ ಶಿಕ್ಷಣಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರಲ್ಲದೇ, ಆಯೋಗದ ಮುಂದೆ ಬರುವ ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ಆದ್ಯತೆ ನೀಡಲಾಗುತ್ತದೆ. ಅನೇಕ ಪ್ರಕರಣಗಳು ಒಂದು ವರ್ಷವಾದರೂ ಬಗೆಹರಿಯುವುದೇ ಇಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಗಮನಹರಿಸಲಾಗುತ್ತದೆ ಎಂದರು.

SCROLL FOR NEXT