ಹುಬ್ಬಳ್ಳಿ: ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವರ ಮಗ ಅಶ್ವಿನ್ ರಾವ್ ಅವರನ್ನು ಕೂಡಲೇ ಬಂಧಿಸಿ, ತನಿಖೆಯನ್ನು ಸಿಬಿಐಗೆ ವಹಿಸಬೇಕು. ನೈತಿಕ ಹೊಣೆ ಹೊತ್ತು ನ್ಯಾ. ಭಾಸ್ಕರರಾವ್ ರಾಜಿನಾಮೆ ನೀಡಬೇಕೆಂದು ಜನ ಸಂಗ್ರಾಮ ಪರಿಷತ್‍ನ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಗೆ ತನ್ನದೇ ಆದ ಘನತೆ, ಗೌರವವಿದೆ. ಇಲ್ಲಿ ಭ್ರಷ್ಟರ ಬೇಟೆಯಾಗಬೇಕೆ ಹೊರತು, ಇಲ್ಲಿಯೇ ಭ್ರಷ್ಟಾಚಾರ ನಡೆಯಬಾರದು. ಸರ್ಕಾರಿ ಅಧಿಕಾರಿಯನ್ನು ಹೆದರಿಸಿ ಹಣ ಪಡೆದುಕೊಳ್ಳಲು ಪ್ರಯತ್ನಿಸಿದ ಪ್ರಕರಣದಲ್ಲಿ ಲೋಕಾಯುಕ್ತರ ಮಗ ಆರೋಪಿಯಾಗಿದ್ದಾರೆ. ಮೇ 11ರಂದು ಸೋನಿಯಾ ನಾರಂಗ್, ಪ್ರಕರಣದ ಕುರಿತು ಲೋಕಾಯುಕ್ತರಿಗೆ ತಿಳಿಸಿದಾಗಲೇ ಲೋಕಾಯುಕ್ತರು ಪುತ್ರ ಅಶ್ವಿನ್‍ರಾವ್ ಅವರನ್ನು ಬಂಧಿಸಬೇಕಿತ್ತು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದೂರು ದಾಖಲಿಸಿಕೊಳ್ಳಬಾರದೆಂದು ಕಾನೂನು ಬಾಹಿರವಾಗಿ ಆದೇಶಿಸಿದ್ದಾರೆ.
ಈ ವಿಷಯ ಗಮನಿಸಿದರೆ, ಲೋಕಾಯುಕ್ತರು ತಮ್ಮ ಪುತ್ರನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಸರ್ಕಾರವು ಲೋಕಾಯುಕ್ತ ಭಾಸ್ಕರರಾವ್ ಅವರಿಗೆ ದೀರ್ಘ ರಜೆ ನೀಡಿ, ಅವರ ಪುತ್ರ ಅಶ್ವಿನ್ ಹಾಗೂ ಅವರೊಂದಿಗೆ ಶಾಮೀಲಾಗಿರುವ ವ್ಯಕ್ತಿಗಳನ್ನು ಬಂಧಿಸಿ, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರವೂ ಲೋಕಾ ಯುಕ್ತರನ್ನು ಈ ಪ್ರಕರಣದಿಂದ ಪಾರು ಮಾಡಲು ಎಸ್‍ಐಟಿ ರಚನೆ ಮÁಡಿದೆ. ಆದರೆ, ವಿಶೇಷ ತನಿಖಾ ದಳ ಸತ್ಯಶೋಧನಾ ವರದಿಯನ್ನು ಎಫ್ಐಆರ್ ದಾಖಲಿಸದೆ ನೀಡಿದೆ. ಆದ್ದರಿಂದ ಕೃಷ್ಣಮೂರ್ತಿ, ಡಿವೈಎಸ್‍ಪಿ ಪ್ರಸನ್ನ, ವಿ. ರಾಜು ನೀಡಿದ ದೂರಿನ ಮೇರೆಗೆ ಅಶ್ವಿನ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.