ಜಿಲ್ಲಾ ಸುದ್ದಿ

ಲೋಕಾಯುಕ್ತರಿಂದ ಅಧಿಕಾರ ದುರ್ಬಳಕೆ, ರಾಜೀನಾಮೆಗೆ ಆಗ್ರಹಿಸಿ ಜು.10 ರಂದು ಪ್ರತಿಭಟನೆ: ಪಿಪಿ ಹೆಗ್ಡೆ

Srinivas Rao BV

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಪುತ್ರನೇ ನೇರವಾಗಿ ಭಾಗಿಯಾಗಿದ್ದಾರೆ.  ಅವರ ಮಗನಿಗೆ ಸಹಾಯವಾಗುವ ರೀತಿಯಲ್ಲಿ ಆದೇಶ ಪಡೆದುಕೊಳ್ಳುವ ಮೂಲಕ ಭಾಸ್ಕರ್ ರಾವ್ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರಾಜ್ಯ ವಕೀಲ ಪರಿಷತ್ ಅಧ್ಯಕ್ಷ ಪಿಪಿ ಹೆಗ್ಡೆ ಆರೋಪಿಸಿದ್ದಾರೆ.

ಬೆಂಗಳೂರು ರಾಜ್ಯ ವಕೀಲ ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಭಾಸ್ಕರ್ ರಾವ್ ರಾಜ್ಯ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಆಗಿದ್ದ ವೇಳೆ   ನೇಮಕಗೊಂಡ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಅವರ ಅವಧಿಯಲ್ಲಿ ನೇಮಕವಾಗಿರುವ ನ್ಯಾಯಾಧೀಶರು ಅವರ ಗೃಹಕ್ಕೆ ತೆರಳಿ ಅವರ ಜತೆ ನೇರವಾಗಿ ಸಂಪರ್ಕ ಸಾಧಿಸಿ ಸಲಹೆ ಸೂಚನೆ ನೀಡತ್ತಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿಗಳ ಈ ನಡೆ ನ್ಯಾಯಾಂಗ ವ್ಯವಸ್ಥೆ ಮೇಲಿನ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ. ಅಲ್ಲದೇ ನ್ಯಾ.ಭಾಸ್ಕರ್ ರಾವ್ ಅವರನ್ನು ಗುರುಗಳಾಗಿ ನೋಡುವ ನ್ಯಾಯಮೂರ್ತಿಗಳು ಭ್ರಷ್ಟ ಭಾಸ್ಕರ್ ರಾವ್ ಅವರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದೇ ಈ ಪ್ರಕರಣವನ್ನು ನಿಭಾಯಿಸುವಂತೆ ಎಚ್ಚರ ವಹಿಸಬೇಕು ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲೆ ಅನುಮಾನ ಮೂಡುವಂತಹ ಮಾತುಗಳನ್ನಾಡಿದ್ದಾರೆ.

ಲೋಕಾಯುಕ್ತರ ಪುತ್ರ ರಾವ್ ಅವರೇ ಭ್ರಷ್ಟಾಚಾರದ ಪ್ರಕರಣದಲ್ಲಿ ಭಾಗಿಯಾಗಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಸ್ವತಃ ಲೋಕಾಯುಕ್ತ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡಲಾಯಿತು. ಈ ಮೂಲಕ ಲೋಕಾಯುಕ್ತ ನ್ಯಾಯಮೂರ್ತಿಗಳು ತಮ್ಮ ಪ್ರಭಾವ ಬೀರಿ ಮಗನಿಗೆ ವಕೀಲಿಕೆ ಮಾಡುವ ಮೂಲಕ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ.

ಈ ಕಾರಣಕ್ಕಾಗಿ ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಅವರು ಈಗಲೇ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪಿಪಿ ಹೆಗ್ಡೆ ಆಗ್ರಹಿಸಿದ್ದಾರೆ. ಈ ಹಿಂದೆ ಆಂಧ್ರ ರದೇಶದಲ್ಲಿ ನಕಲಿ ದಾಖಲೆ ಸೃಷ್ಠಿ ಮಾಡಿದ ಹಾಗೂ ವಂಚನೆ ಮಾಡಿದ ಆರೋಪದ ಪ್ರಕರಣಗಳಲ್ಲಿ ಅಶ್ವಿನ್ ರಾವ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇಂತಹ ಇತಿಹಾಸ ಹೊಂದಿರುವ ಅಶ್ವಿನ್ ಅವರನ್ನು ಸ್ವತಃ ಭಾಸ್ಕರ್ ರಾವ್ ರಕ್ಷಣೆ ಮಾಡುತ್ತಿದ್ದಾರೆ. ಅಶ್ವಿನ್ ಲಂಚದ ಹಣದಲ್ಲಿ ಭಾಸ್ಕರ್ ರಾವ್ ನೇರ ಫಲಾನುಭವಿಗಳಾಗಿದ್ದಾರೆ ಎಂದು ಪಿಪಿ ಹೆಗ್ಡೆ ದೂರಿದ್ದಾರೆ.

ಜು.10  ರಂದು ರಾಜ್ಯದ ಎಲ್ಲಾ ಜನಪರ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆಗಳ ಜೊತೆ ರಾಜ್ಯ ವಕೀಲರ ಪರಿಷತ್ ನ ಎಲ್ಲಾ 198 ಸಂಘಗಳ ಪದಾಧಿಕಾರಿಗಳು ಬೆಂಗಳುರಿನಲ್ಲಿ ಭಾಸ್ಕರ್ ರಾವ್ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೆಗ್ಡೆ ತಿಳಿಸಿದ್ದಾರೆ.

SCROLL FOR NEXT