ಜಿಲ್ಲಾ ಸುದ್ದಿ

ಖಾಕಿಗಳ ನಡುವೆಯೇ ಕಾದಾಟ: ಠಾಣೆಗೆ ದೂರು, ಪ್ರತಿದೂರು ಸಲ್ಲಿಕೆ

Srinivas Rao BV

ಬೆಂಗಳೂರು: ಸಂಚಾರ ಪೊಲೀಸ್ ಸಿಬ್ಬಂದಿ ಮತ್ತು ಬಿಎಂಟಿಸಿ ಚಾಲಕ- ನಿರ್ವಾಹಕರು  ಕಿತ್ತಾಡಿಕೊಂಡು ಪರಸ್ಪರರ ಮೇಲೆ ಹಲ್ಲೆ ನಡೆಸಿರುವ ಘಟನೆ ಗೊರಗುಂಟೆಪಾಳ್ಯದಲ್ಲಿ ನಡೆದಿದೆ.

ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಯಶವಂತಪುರ ಸಂಚಾರ ಠಾಣೆಯ ಎಎಸ್ಐ ಗಂಗಹನುಮಂತಯ್ಯ ಮತ್ತು ಕಾನ್ಸ್ ಟೇಬಲ್  ರಮೇಶ್ ಅವರು ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಬಿಎಂಟಿಸಿ ಬಸ್ ಚಾಲಕ ಷಣ್ಮುಕ ಮತ್ತು ನಿರ್ವಾಹಕ ಮಂಜುನಾಥ ಅವರು ಅದೇ ಠಾಣೆಗೆ ಪ್ರತಿ ದೂರು ಸಲ್ಲಿಸಿದ್ದಾರೆ.

ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಕ್ರಮ ಜರುಗಿಸಲು ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ಬೆಳಿಗ್ಗೆ 6 ಗಂಟೆಗೆ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆವು. ಯಶವಂತಪುರದಿಂದ ಕೆಂಗೇರಿಗೆ ಹೋಗುತ್ತಿದ್ದ ಬಸ್ ಚಾಲಕ ಗೊರಗುಂಟೆ ಪಾಳ್ಯ ಜಂಕ್ಷನ್ ಬಳಿ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಬಸ್ ನ ಚಾಲಕ-ನಿರ್ವಾಹಕ ನಮ್ಮ ಬಳಿ ಜಗಳ ತೆಗೆದರು. ಈ ಬಗ್ಗೆ ಅವರ ಜತೆ ಮಾತನಾಡಲು ಬಸ್ ಗೆ ಹತ್ತಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮನ್ನು ಸುಮನಹಳ್ಳಿ ಡಿಪೋಗೆ ಕರೆದೊಯ್ದು ಇತರ ಸಿಬ್ಬಂದಿಗಳೊಂದಿಗೆ ಸೇರಿ ಥಳಿಸಿದ್ದಾರೆ ಎಂದು ಹಲ್ಲೆಗೊಳಗಾದ ಪೊಲೀಸರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಸ್ ಚಾಲಕ- ನಿರ್ವಾಹಕರು ತಳ್ಳಿಹಾಕಿದ್ದು ಪೊಲೀಸರೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬಿಎಂಟಿಸಿ ಸಿಬ್ಬಂದಿ, ಪೊಲೀಸರು ನೀಡಿರುವ ದೂರನ್ನು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT