ಜಿಲ್ಲಾ ಸುದ್ದಿ

ರೈತರು ಸತ್ರೆ ನಾವೇನು ಮಾಡೋಕೆ ಆಗುತ್ತೆ?

Rashmi Kasaragodu

ಹುಬ್ಬಳ್ಳಿ:  ರೈತರು ಸತ್ತರೆ ನಾವೇನು ಮಾಡಲಾಗುತ್ತದೆ? ರೈತರ ಸಾವಿಗೆ ಸರ್ಕಾರ ಹೊಣೆಯಾಗಲ್ಲ. ಜಾಸ್ತಿ ಬಡ್ಡಿಗೆ ಸಾಲ ತೆಗೆದುಕೊಳ್ಳಿ ಎಂದು ಸರ್ಕಾರಹೇಳಿತ್ತಾ? ಹೀಗೆಂದು ಹೇಳಿದವರು ರಾಜ್ಯ ಸರ್ಕಾರದ  ಹಿರಿಯ ಮಂತ್ರಿ ಎಂದೆನಿಸಿಕೊಂಡಿರುವ ಕೃಷಿ ಮತ್ತು ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ! ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ರೈತರ ಸರಣಿ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೈತರು ಬಡ್ಡಿಗೆ ಸಾಲ ತೆಗೆದುಕೊಳ್ಳುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತದೆ? ರೈತರ ನೆರವಿಗೆ ಸರ್ಕಾರ ಬಂದಿದೆ ಎಂದು ಖಾರವಾಗಿ ಹೇಳಿದ್ದಾರೆ. ರೈತರು ಶೇ.8 ರಿಂದ ಶೇ. 9ರಷ್ಟು ಬಡ್ಡಿಗೆ ಸಾಲ ತೆಗೆದುಕೊಂಡಿ ದ್ದಾರೆ. ಈ ರೀತಿ ಸಾಲ ತೆಗೆದುಕೊಳ್ಳಲು ಸರ್ಕಾರವೇನಾದರೂ ರೈತರಿಗೆ ಹೇಳಿತ್ತಾ? ಹೀಗೆ ಸಾಲ ತೆಗೆದುಕೊಂಡು ಸಾವಿನ ಮನೆ ಸೇರಿದ್ರೆ ಸರ್ಕಾರವೇನು ಮಾಡಲಿಕ್ಕೆ ಆಗುತ್ತೆ ಎಂದೂ ಅವರು ಪ್ರಶ್ನಿಸಿದ್ದಾರೆ. ಇದಷ್ಟೇ ಅಲ್ಲ, ರೈತರ ಆತ್ಮಹತ್ಯೆಗೆ ಸರ್ಕಾರವನ್ನು ದೂಷಿಸಿದರೆ ಏನು ಪ್ರಯೋಜನವಿಲ್ಲ ಎಂದಿದ್ದಾರೆ.

ರೈತರಿಗೆ ಅನುಕೂಲವಾಗಲಿ ಎಂಬ ನಿಟ್ಟಿ ನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಅದು ಬಿಟ್ಟು ಬಡ್ಡಿಗೆ ಸಾಲ ಮಾಡಿ ಕಷ್ಟಕ್ಕೆ ಒಳಗಾಗುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಆಕ್ರೋಶ: ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪವ್ಯಕ್ತಪಡಿಸಿವೆ. ಇದಷ್ಟೇ ಅಲ್ಲ, ರೈತ ಮುಖಂಡರೂ ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಸಮಾಧಾನ ಪಡಿಸುವ, ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಅವರ ಸಾವಿನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ಮತ್ತು ರೈತ ಮುಖಂಡರು ಹೇಳಿದ್ದಾರೆ. ಸಚಿವರ ಕಡೆಯಿಂದ ಇಂಥ ಬೇಜವಾಬ್ದಾರಿ ಹೇಳಿಕೆಗಳು ಬಂದಿರುವುದು ದುರದೃಷ್ಟವೇ ಸರಿ ಎಂದಿದ್ದಾರೆ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಚಿ ವರು ವಯಸ್ಸಿಗೆ ತಕ್ಕಂತೆ ವರ್ತಿಸಬೇಕು. ಜವಾಬ್ದಾರಿಯಿಂದ ರೈತರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕು. ಅದು ಬಿಟ್ಟು ಹೀಗೆ ಹೇಳುವುದು ಸರಿಯಲ್ಲ ಎಂದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್ ಬ್ರಿಗೇಡ್ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇಂದು ರೈತನ ಜೀವನಕ್ಕೆ ಭದ್ರತೆಯೇಇಲ್ಲವಾಗಿದೆ. ಅವನ ಉತ್ಪಾದನೆಗೆ ಬೆಲೆ ಇಲ್ಲ. ಸಾಲ ಮಾಡಿ ಆತ ಜೀವ ಕಳೆದುಕೊಳ್ಳುತ್ತಿದ್ದರೆ ಅದರ ಜವಾಬ್ದಾರಿಯನ್ನು ಸರಕಾರವೇ ಹೊರಬೇಕು ಎಂದು ಗುಡುಗಿದ್ದಾರೆ.


ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಲ್ಲಿ ವಿಶ್ವಾಸ ತುಂಬುವುದನ್ನು ಬಿಟ್ಟು, ರೈತರ ಸಾವಿಗೆ ಸರ್ಕಾರ ಹೊಣೆಯಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿರುವ ಶಾಮನೂರ ಶಿವಶಂಕರಪ್ಪ ಅವರನ್ನು ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈಬಿಡಬೇಕು. ಈ ಹಿಂದೆ ಆಲಿಕಲ್ಲು ಮಳೆಯಿಂದಾಗಿ ರೈತರ ಬೆಳೆ ನಾಶವಾಗಿದ್ದವು. ಆಗಲೂ ಇವ್ರು ದುಡ್ಡೇನು
ಜೇಬಿನಿಂದ ಉದುರುತ್ತವೆಯೇ ಎಂದಿದ್ದರು.
- ಕೆ.ಎಸ್.ಈಶ್ವರಪ್ಪ, ಪ್ರತಿಪಕ್ಷ ನಾಯಕ



ಸಚಿವ ಶಾಮನೂರು ಶಿವಶಂಕರಪ್ಪಗೆ ಹಣ ಹಾಗೂ ಅಧಿಕಾರದ ದರ್ಪ ಸೇರಿಕೊಂಡಿದೆ. ಅದಕ್ಕೇ ಹೀಗೆ ಉದ್ಧಟತನದ ಮಾತುಗಳನ್ನಾಡಿದ್ದಾರೆ. ವಯಸ್ಸಿಗೆ ತಕ್ಕಂತೆ ಅವರು ವರ್ತಿಸಿ, ಜವಾಬ್ದಾರಿಯಿಂದ ಸ್ಪಂದಿಸಬೇಕು. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಹೀಗೆ ಆದರೆ ಅವರ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಕಪ್ಪುಬಟ್ಟೆ ಕಟ್ಟಿ ಪ್ರತಿಭಟಿಸುತ್ತೇವೆ.
- ಕುರುಬೂರು ಶಾಂತಕುಮಾರ್, ರೈತ ಮುಖಂಡ


ಜವಾಬ್ದಾರಿ ಸ್ಥಾನದಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಬಾಲಿಶ ಹೇಳಿಕೆ ಇದು. ಸಾಲ ಮಾಡಿ ಆತ ಜೀವ ಕಳೆದುಕೊಳ್ಳುತ್ತಿದ್ದರೆ
ಅದರ ಜವಾಬ್ದಾರಿ ಸರ್ಕಾರದ್ದೇ. ಸಚಿವ ಶಾಮನೂರು ಅವರಿಗೆ ಮಾನ-ಮರ್ಯಾದೆ ಇದ್ದರೆ ರೈತರಿಗೆ
ನೀಡಬೇಕಿರುವ ಬಾಕಿಯನ್ನು ಮೊದಲು ನೀಡಲಿ.
- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ



ಸಾಲ ಬಾಧೆ: ವಿಷ ಗುಳಿಗೆ ನುಂಗಿ ರೈತ ಆತ್ಮಹತ್ಯೆ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ತಿಮ್ಮೋಜನಹಳ್ಳಿಯ ರೈತ ಚನ್ನೇಗೌಡ(51) ಎಂಬುವರು ಆರ್ಥಿಕ ಸಂಕಷ್ಟದಿಂದಾಗಿ ಮಂಗಳವಾರ ರಾತ್ರಿ ವಿಷದ ಗುಳಿಗೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತರಕಾರಿ ಬೆಳೆಗಳು ಕೈಕೊಟ್ಟ ಕಾರಣದಿಂದ ಚನ್ನೇಗೌಡ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ, ಪರಿಚಯಸ್ಥರಿಂದ ಪಡೆದಿದ್ದ
ಸಾಲ ಹಿಂತಿರುಗಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT