ಕಿಡ್ನಿ ಮಾರಾಟ (ಒಳಗಿನ ಫೋಟೋದಲ್ಲಿ ಶಶಿಕಲಾ) 
ಜಿಲ್ಲಾ ಸುದ್ದಿ

ಚುನಾವಣೆಗೆ ಮಾಡಿದ ಸಾಲ ಕಿಡ್ನಿ ಮಾರಿ ತೀರಿಸಿದಳು!

ಗ್ರಾಮ ಪಂಚಾಯಿತಿ ಚುನಾವಣೆಗೆಂದು ಮಾಡಿಕೊಂಡ ಸಾಲ ತೀರಿಸಲು ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನೇ ಮಾರಿಕೊಂಡ ಪ್ರಸಂಗವಿದು...

ಮಾಗಡಿ: ಗ್ರಾಮ ಪಂಚಾಯಿತಿ ಚುನಾವಣೆಗೆಂದು ಮಾಡಿಕೊಂಡ ಸಾಲ ತೀರಿಸಲು ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನೇ ಮಾರಿಕೊಂಡ ಪ್ರಸಂಗವಿದು. ಕಿಡ್ನಿ ಮಾರುವ ಸಲುವಾಗಿಯೇ  ಬೇರೊಬ್ಬ ವ್ಯಕ್ತಿಯ ಪತ್ನಿಯೆಂದು ದಾಖಲೆಯನ್ನೇ ಸೃಷ್ಟಿ ಮಾಡಿದ ಕಲಿಯುಗದ ನಾರಿ ಈಕೆ. ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಕಿಡ್ನಿಯನ್ನೇ ಮಾರಿಕೊಂಡಿದ್ದು ಈಕೆಯ ಕಥೆಯಾದರೆ, ಕಿಡ್ನಿಯನ್ನು ಪಡೆದುಕೊಂಡವರದ್ದೇ ಬೇರೊಂದು ಕಥೆ. ತನ್ನ ತಾಯಿಯನ್ನು ಬದುಕಿಸಿಕೊಳ್ಳಬೇಕೆಂಬ ಹಂಬಲದಿಂದ ಬೇರೊಬ್ಬರ ಪತ್ನಿಯನ್ನು ತನ್ನ ಪತ್ನಿ ಎಂದು ಹೇಳಿಕೊಂಡ ಆ ವ್ಯಕ್ತಿ, ಮಹಿಳೆಯಿಂದ ಕಿಡ್ನಿ ಪಡೆದು ತನ್ನ ತಾಯಿಯನ್ನು ಉಳಿಸಿಕೊಂಡಿದ್ದಾನೆ  ಆಕೆ ಮಾಡಿದ್ದು ಹಣಕ್ಕಾಗಿ, ಈತ ಮಾಡಿದ್ದು ತನ್ನ ಹೆತ್ತಮ್ಮನ ಜೀವ ಉಳಿಸಿಕೊಳ್ಳುವುದಕ್ಕಾಗಿ. ಗಂಡನಿಗೆ ಗೊತ್ತಿಲ್ಲದಂತೆ ತನ್ನ ದೇಹದ ಅಂಗವನ್ನೇ ಮಾರಿದ ಈ ಹೆಣ್ಣು ಈಗಲೂ ತಾನು ಮಾಡಿದ್ದೇ ಸರಿ ಎನ್ನುತ್ತಿದ್ದಾಳೆ.

ಸೋಲೇ ಶೂಲ
: ಚುನಾವಣೆ  ಕಣ ಎಂದರೇ ಹಾಗೆ, ಸಾಲ ಸೋಲ ಮಾಡಿಯಾದ್ರೂ  ಗೆಲ್ಲ ಬೇಕು ಎಂಬ ಹಠ  ತೊಟ್ಟ ಮಹಿಳೆ, ಸಾಲ ಮಾಡಲೂ  ಹಿಂದೆ ಮುಂದೆ ನೋಡಲಿಲ್ಲ.
ಮಾಗಡಿ ತಾಲೂಕಿನ ನಾಗಶೆಟ್ಟಹಳ್ಳಿ ಯ ವೆಂಕಟೇಶ್ ಎಂಬುವರ ಪತ್ನಿ ಶಶಿಕಲಾ ತಗ್ಗೀಕುಪ್ಪೆ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಗೆ ಹಣ ಬೇಕಿತ್ತು. ಆದ್ದರಿಂದ ಪರಿಚಯಸ್ಥರಿಂದ  ಸಾಲ ಮಾಡಿದರು. ಕೊನೆಗೆ ಚುನಾವಣೆಯಲ್ಲಿ ಕೇವಲ 2 ಮತಗಳ ಅಂತರದಿಂದ ಸೋಲುಂಡರು. ಸೋಲಿನ ಜತೆಗೆ ಸಾಲದ ಶೂಲೆಗೂ  ಆಕೆ ಸಿಲುಕಿಕೊಂಡರು.
ಸಾಲಗಾರರ ಕಾಟ ಹೆಚ್ಚಾಗತೊಡಗಿತು. ಕಡೆಗೆ ಸಾಲ ಮರುಪಾವತಿಸಲು ಆಕೆಗೆ ಕಂಡದ್ದು ಒಂದೇ ದಾರಿ... ಅದೇ ಕಿಡ್ನಿ ಮಾರಾಟ.

ಬೇರೊಬ್ಬಗೆ ಪತ್ನಿ: ಶಶಿಕಲಾ ಅವರಿಗೆ ಬೆಂಗಳೂರಿನಲ್ಲಿ ಶ್ರೀನಿವಾಸ್ ಎಂಬುವರ ಪರಿಚಯವಿತ್ತು. ಶ್ರೀನಿವಾಸ್ ಅವರ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆಕೆಯ ಅನಾರೋಗ್ಯವನ್ನು ಕಣ್ಣಾರೆ ನೋಡಿದ್ದ ಶಶಿಕಲಾ ತನ್ನ ಪತಿಗೆ ತಿಳಿ ಯದಂತೆ ಶ್ರೀನಿವಾಸ್‍ರ ತಾಯಿಗೆ ಕಿಡ್ನಿ ಮಾರಾಟ ಮಾಡುವ ನಿರ್ಧರಿಸಿದ್ದರು.
ಕಿಡ್ನಿ ಕೊಟ್ಟರೆ ರು. 3 ಲಕ್ಷ ಹಣ ನೀಡುವುದಾಗಿ ಶ್ರೀನಿವಾಸ್ ಅವರೂ ಶಶಿಕಲಾ ಅವರಿಗೆ ಭರವಸೆ ನೀಡಿದರು. ಶಶಿಕಲಾರನ್ನು ತನ್ನ ಪತ್ನಿ ಎಂದೇ ದಾಖಲೆ  ಸೃಷ್ಟಿ  ಮಾಡಿಕೊಂಡ ಆತ, ತನ್ನ ತಾಯಿಗೆ ಇವರ ಕಿಡ್ನಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಸಿ ಮಾಡಿಸಿದರು.

ಶಸ್ತ್ರ ಚಿಕಿತ್ಸೆ ಮುಗಿಯುತ್ತಲೇ ಶಶಿಕಲಾ ಅವರಿಗೆ ರು.3 ಲಕ್ಷ ಹಣ ಸಂದಾಯ ವಾಗಿದೆ. ಸಾಲಗಾರರಿಗೆ ಕೊಡಬೇಕಾ ಹಣವನ್ನೆಲ್ಲ ಕೊಟ್ಟು ಶಶಿಕಲಾ ಋಣಮುಕ್ತವಾಗಿದ್ದಾರೆ . ಶಸ್ತ್ರ ಚಿಕಿತ್ಸೆಯ ಹೊಲಿಗೆ ಇನ್ನೂ  ಬಿಚ್ಚಿಲ್ಲ. ಈಗ ಶಶಿಕಲಾ  ಮಾಗಡಿ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ.

ಪತಿ ಅಪರಾಧಿಯಲ್ಲ:
ಶಶಿಕಲಾಳ ಈ ಸ್ಥಿತಿಗೆ ಗಂಡ ವೆಂಕಟೇಶನೇಕಾರಣವೆಂದು ಯಾರೋ ಕಿಡಿಗೇಡಿಗಳು ಸುದ್ದಿ ಹಬ್ಬಿಸಿದ್ದರಿಂದ, ಹೆದರಿ ವೆಂಕಟೇಶ ಕೂಡ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ.
ಏನೂ ಗೊತ್ತಿಲ್ಲದ ತನ್ನ ಪತಿ ವೆಂಕಟೇಶ ನನ್ನು ಅಪರಾಧಿಸ್ಥಾನದಲ್ಲಿ ನಿಲ್ಲಿಸುವುದು ಬೇಡ. ಎಲ್ಲದಕ್ಕೂ ನಾನೇ ಹೊಣೆ ಎಂದು ಈ ಶಶಿಕಲಾ ಕಣ್ಣೀರಿಡುತ್ತಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದೆ. ಮಾಗಡಿ ಸಿಪಿಐ ನಂದೀಶ್, ಪಿಎಸೈ ಸುರೇಶ್ ಸಿಬ್ಬಂದಿ ನಾಗರಾಜು, ಗೋವಿಂದರಾಜು, ರಾಜಣ್ಣ ತನಿಖೆ ನಡೆಸುತ್ತಿದ್ದಾರೆ.

ನಕಲಿ ದಾಖಲೆ ಸಲೀಸು: ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಅಂಗಾಂಗ ಕಸಿಯ ದಾಖಲೆಗೆ ಠಸ್ಸೆ ಒತ್ತಿದ್ದು ಹೇಗೆ? ಸರ್ಕಾರಿ ಕಚೇರಿಗಳಲ್ಲಿ ಈ ಇಬ್ಬರೂ ಪತಿ ಪತ್ನಿಯರೆಂದು  ದಾಖಲೆಗಳು ಸೃಷ್ಟಿಯಾಗಿದ್ದು ಹೇಗೆ? ನಕಲಿ ದಾಖಲೆಗಳಿಂದಲೇ ಕಿಡ್ನಿ ಕಸಿಯ ಈ ಸಂಪೂರ್ಣ ಪ್ರಹಸನ ಮುಗಿದಿದ್ದಾದರೂ ಹೇಗೆ ಎಂಬುದು ಅನುಮಾನಗಳಿಗೆ ಕಾರಣ ವಾಗಿದೆ. ಸರ್ಕಾರದ ಅಧಿಕಾರಿಗಳು ಯಾವ ಹಂತದಲ್ಲೂ ಪರಿಶೀಲನೆಗೆ ಮುಂದಾಗಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT