ಬೆಂಗಳೂರು: ನಗರದ ಪೀಣ್ಯ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿಯೊಬ್ಬರು ಆರ್‍ಟಿಐ ಕಾರ್ಯಕರ್ತನ ಮೇಲೆ ಸಿಟ್ಟಿಗೆದ್ದು ಚಪ್ಪಲಿ ಹಾಗೂ ಕಲ್ಲು ತೂರಿ ಹಲ್ಲೆ ನಡೆಸಿರುವ ಘಟನೆ ನಾಗರಭಾವಿ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಹಲ್ಲೆಗೊಳಗಾಗಿರುವ ಆರ್‍ಟಿಐ ಕಾರ್ಯಕರ್ತ ವೇಣುಗೋಪಾಲ ಅವರು ಉಪ ನೋಂದಣಾಧಿಕಾರಿ ಗೋಪಾಲಕೃಷ್ಣ ಅವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗೋಪಾಲಕೃಷ್ಣ ಸಹ ಪ್ರತಿದೂರು ದಾಖಲಿಸಿದ್ದಾರೆ. ನಾಗರಬಾವಿಯಲ್ಲಿ ಬಿಡಿಎಗೆ ಸೇರಿದ 218.5 ಚದರ ಅಡಿ ಜಾಗವನ್ನು ಗೋಪಾಲಕೃಷ್ಣ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರನ್ನು ಪರಿಶೀಲಿಸಿದ ಬಿಡಿಎ ಆಯುಕ್ತ ಶ್ಯಾಂ ಭಟ್ ಅವರು ತೆರವಿಗೆ ಆದೇಶಿಸಿದ್ದರು. ಅದನ್ನು ತಿಳಿಸಲು ಖಾಸಗಿ ವಾಹಿನಿ ಜತೆ ಅವರ ಮನೆ ಬಳಿ ಹೋದ ವೇಳೆ ಆರ್‍ಟಿಐ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ.
ಘಟನೆ ವಿವರ: ಮೂಲತಃ ಮೈಸೂರಿನವರಾದ ಗೋಪಾಲಕೃಷ್ಣ ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ನಾಗರಬಾವಿ ಯಲ್ಲಿ ಮನೆ ನಿರ್ಮಿಸಿದ್ದಾರೆ. ಈ ವೇಳೆ ಬಿಡಿಎ ನಿವೇಶನ ಒತ್ತುವರಿಯಾಗಿದ್ದು, ಆ ಬಗ್ಗೆ ಆರ್‍ಟಿಐ ಕಾರ್ಯಕರ್ತ ವೇಣುಗೋಪಾಲ್ ಅರ್ಜಿ ಸಲ್ಲಿಸಿದ್ದರು. ದಾಖಲೆ ಪಡೆದ ಅವರು ಅದನ್ನು ಬಿಡಿಎ ಆಯುಕ್ತರ ಗಮನಕ್ಕೆ ತಂದು, ದೂರು ಸಲ್ಲಿಸಿದ್ದರು. ಪರಿಶೀಲಿಸಿದ ಆಯುಕ್ತರು ಒತ್ತುವರಿ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಮೇ 27ರಂದು ತೆರವಿಗೆ ಆದೇಶ ಹೊರಡಿಸಿದ್ದರು. ಆದರೆ, ಆರೋಪಿ ಸ್ಥಾನದಲ್ಲಿರುವ ಗೋಪಾಲಕೃಷ್ಣ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಪ್ರಕ್ರಿಯೆ ಮುಂದುವರಿಸಿದ ಆಯುಕ್ತರು ಇದೇ ಜುಲೈ 17ರಂದು ತೆರವಿಗೆ ಮತ್ತೆ ಆದೇಶ ಹೊರಡಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಗೋಪಾಲಕೃಷ್ಣ ಅವರು, ಗುರುವಾರ ವೇಣುಗೋಪಾಲ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಹಣಕ್ಕಾಗಿ ಬೆದರಿಕೆ: ಆತ ತನ್ನ ಬಳಿ ಬಂದು ಹಣ ಕೇಳಿದ್ದ. ಹಣ ನೀಡಲು ನಾನು ನಿರಾಕರಿಸಿದ್ದರಿಂದ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿ ತನಗೆ ಬೆದರಿಕೆ ಹಾಕಿದ್ದಾನೆ. 5 ತಿಂಗಳಿಂದ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಗೋಪಾಲಕೃಷ್ಣ ಪ್ರತಿದೂರು ದಾಖಲಿಸಿದ್ದಾರೆ.
ಒತ್ತುವರಿ ಸಂಬಂಧ ಲೋಕಾಯುಕ್ತ ಹಾಗೂ ಬಿಡಿಎನಲ್ಲಿ ದೂರು ದಾಖಲಿಸಲಾಗಿದೆ. ತೆರವಿಗೆ ಆದೇಶವಿದ್ದರೂ ಎಇಇ ಮನೆ ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಖಾಸಗಿ ವಾಹಿನಿ ಜತೆ ಅವರ ಮನೆಗೆ ಹೋದಾಗ ಹಲ್ಲೆ ಮಾಡಿದ್ದಾರೆ. ಅವರ ಬಳಿ ತಾನು ಹಣ ಕೇಳಿರುವ ಬಗ್ಗೆ ಸಾಕ್ಷಿ ಒದಗಿಸಿದಲ್ಲಿ ಶಿಕ್ಷೆಗೆ ಸಿದ್ಧ.
- ವೇಣುಗೋಪಾಲ, ಆರ್ ಟಿ ಐ ಕಾರ್ಯಕರ್ತ