ಜಿಲ್ಲಾ ಸುದ್ದಿ

ಲೋಕಾಯುಕ್ತ ಹಗರಣ: ಎಸ್.ಐ.ಟಿ ತನಿಖೆ ಆದೇಶ ರದ್ದುಕೋರಿ ಸುಪ್ರೀಂ ಗೆ ಮೊರೆ

Srinivas Rao BV

ಬೆಂಗಳೂರು: ಲೋಕಾಯುಕ್ತರಲ್ಲಿ ನಡೆದಿದೆ ಎನ್ನಲಾದ ರೂ 1 ಕೋಟಿ ಭ್ರಷ್ಟಾಚಾರ ಪ್ರಕರಣ ಎಸ್.ಐ.ಟಿ ಗೆ ತನಿಖೆ ನೀಡಿ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕರ್ನಾಟಕ ರಾಜ್ಯ ವಕೀಲರ ಒಕ್ಕೂಟದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ಪ್ರಕರಣ ಎಸ್.ಐ.ಟಿ ಗೆ ವಹಿಸಿರುವುದು ಸರಿಯಲ್ಲ. ಸಿಬಿಐ ತನಿಖೆಗೆ ಒಳಪಡಲು ಯೋಗ್ಯವಾದ ಪ್ರಕರಣ ಇದಾಗಿದ್ದು, ಸಿಬಿಐ ತನಿಖೆ ನಡೆಸಿದರೆ ಮಾತ್ರ ಸತ್ಯ ಹೊರಬರಲು ಸಾಧ್ಯ. ಹೀಗಾಗಿ ಪ್ರಕರಣ ಸಿಬಿಐಗೆ ವಹಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರುವುದಾಗಿ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ಹೆಸರು ಕೇಳಿಬರುತ್ತಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಕುಮ್ಮಕ್ಕು ನೀಡದೇ ಈ ಕೆಲಸ ನಡೆದಿರಲು ಸಾಧ್ಯವಿಲ್ಲ. ಆದ್ದರಿಂದ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲವೇ ದೀರ್ಘಾವಧಿ ರಜೆ ಮೇಲೆ ತೆರಳಬೇಕು. ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಭಾಸ್ಕರ್ ರಾವ್ ಅವರು, ಆರೋಪ ಕೇಳಿಬಂದರೆ ಮರ್ಯಾದೆ ಹಾಗೂ ಗೌರವದಿಂದ ಆ ಹುದ್ದೆಯಿಂದ ಕೆಳಗಿಳಿಯಬೇಕಾಗಿರುವುದು ಸೂಕ್ತ ಎಂದರು.

ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ವಿರೋಧ: ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಸುಬ್ಬಾ ರೆಡ್ಡಿ ವಿರೋಧಿಸಿದ್ದಾರೆ. ಕಾಯ್ದೆ ತಿದ್ದುಪಡಿಯಿಂದ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆ ಹೊರತು ಅದನ್ನು ದುರ್ಬಲಗೊಳಿಸಬಾರದು. ಆದರೆ ಸರ್ಕಾರ ತಿದ್ದುಪಡಿ ತರುವ ಭರದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲ್ಲದ ಹಾವಿನಂತೆ ಮಾಡಲು ಎಂದು ಸರ್ಕಾರದ ಕ್ರಮವನ್ನು ಕಂಡಿಸಿದರು.

SCROLL FOR NEXT