ಬೆಂಗಳೂರು: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಲು ಶೀಘ್ರವೇ ಕೇಂದ್ರಕ್ಕೆ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಕರೆದೊಯ್ಯಲಾಗುವುದು ಎಂದು ಸಕ್ಕರೆ ಖಾತೆ ಸಚಿವ ಎಚ್.ಎಸ್. ಮಹಾದೇವಪ್ರಸಾದ್ ತಿಳಿಸಿದ್ದಾರೆ.
ಪ್ರತಿ ವರ್ಷ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ದರ ನಿಗದಿ ವಿಚಾರಕ್ಕೆ ಘರ್ಷಣೆ ನಡೆಯುತ್ತಿದೆ. ಇದನ್ನು ತಪ್ಪಿಸಲು ಸ್ಥಿರ ನಿಧಿ ಸ್ಥಾಪಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಮಂತ್ರಿ ಬಳಿಗೆ ನಿಯೋಗ ತೆರಳುವುದಕ್ಕೆ ಸಂಬಂಧಿಸಿದಂತೆ ಕಚೇರಿಯಿಂದ ಈಗಾಗಲೇ ಸಮಯ ನಿಗದಿಗೆ ಅವಕಾಶದ ಕೋರಿಕೆ ಸಲ್ಲಿಸಲಾಗಿದೆ. ಆಗಸ್ಟ್ ನಲ್ಲಿ ಸಮಯ ನಿಗದಿಪಡಿಸುವಂತೆ ಪತ್ರ ಬರೆಯಲಾಗಿದೆ. ಸಮಯ ನಿಗದಿಯಾಗುತ್ತಿದ್ದಂತೆ ನಿಯೋಗ ತೆರಳಿ ಕೇಂದ್ರದ ಮಧ್ಯಪ್ರವೇಶಕ್ಕೆ ಒತ್ತಾಯಿಸಲಾಗುವುದು ಎಂದು ಅವರು ವಿವರಿಸಿದರು. ಕಬ್ಬು ಬೆಳೆಗೆ ಎಫ್ ಆರ್ ಪಿ ನಿಗದಿ ಮಾಡುವುದು ಮತ್ತು ಸಕ್ಕರೆ ದರ ನಿಯಂತ್ರಣ ಮಾಡುವುದು ಕೇಂದ್ರ ಸರ್ಕಾರ. ಆದರೆ ಈ ಬಾರಿ ಸಕ್ಕರೆ ದರ ಸತತವಾಗಿ ಕುಸಿಯುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಎಫ್ಆರ್‍ಪಿ ದರದಂತೆ ರೈತರಿಗೆ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಆದ್ದರಿಂದ ಪ್ರತಿ ಬಾರಿ, ಸಕ್ಕರೆ ಕಾರ್ಖಾನೆಗಳು ರೈತರಿಗೆ ಎಫ್ಆರ್‍ಪಿ ದರದಂತೆ ಹಣ ನೀಡದಿದ್ದರೆ ಕೇಂದ್ರ ಮಧ್ಯಪ್ರವೇಶ ಮಾಡಬೇಕು.ಎಫ್ಆರ್‍ಪಿ ದರದಲ್ಲಿ ಆಗುವ ಕೊರತೆಯನ್ನು ಕೇಂದ್ರ ಭರಿಸಿಕೊಡಬೇಕು. ಇದಕ್ಕಾಗಿ ಸ್ಥಿರ ನಿಧಿ ಸ್ಥಾಪಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಎಫ್ಆರ್‍ಪಿ ದರದಂತೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಾವಿರದ 678 ಕೋಟಿ ಬಾಕಿ ಪಾವತಿಸಬೇಕು. ಆದರೆ ಎಫ್ ಆರ್ ಪಿ ನಿಗದಿ ಮಾಡಿದಾಗ ಸಕ್ಕರೆ ದರ ಕೆ.ಜಿ ಗೆ 20 ರೂಪಾಯಿ ಇತ್ತು. ಈಗ ಸಕ್ಕರೆ ದರ ಕೆ.ಜಿಗೆ 19ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಕಾರ್ಖಾನೆಗಳು ಬಾಕಿ ಪಾವತಿಸಲು ಹಿಂದೇಟು ಹಾಕುತ್ತಿವೆ. ಈಗ ಪ್ರತಿ ಟನ್ ಗೆ ಎಫ್ಆರ್‍ಪಿ ಪ್ರಕಾರ ಹಣ ಪಾವತಿಸಲು 400 ರೂಪಾಯಿ ಕೊರತೆ ಉಂಟಾಗುತ್ತಿ ದೆ. ಇದನ್ನು ಕೇಂದ್ರ ಸರ್ಕಾರ ಭರಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.
2015-16ನೇ ಸಾಲಿಗೆ ಕೇಂದ್ರ ಸರ್ಕಾರ ಪ್ರತಿ ಟನ್‍ಗೆ 2,300 ರೂಪಾಯಿ ನಿಗದಿ ಮಾಡಿದೆ. ಆದರೆ ತಾಂತ್ರಿಕ ಸಮಿತಿ ಕಳೆದ ವರ್ಷ 2,200 ರೂ ನಿಗದಿ ಮಾಡಿತ್ತು. ಇದರಿಂದ ಈಗ <400 ಕೊರತೆ ಉಂಟಾಗುತ್ತದೆ. ಆದ್ದರಿಂದ ಆಗಸ್ಟ್ ನಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ಇದಕ್ಕೆ ಅನ್ವಯವಾಗುವಂತೆ ಎಫ್ಆರ್‍ಪಿ ಇನ್ನೂ ನಿಗದಿ ಮಾಡಿಲ್ಲ ಎಂದು ಅವರು ಹೇಳಿದರು.