ಜಿಲ್ಲಾ ಸುದ್ದಿ

ಹೃದಯ ನೀಡಿ ಸಾವಲ್ಲೂ ಸಾರ್ಥಕತೆ

ಬೆಂಗಳೂರು: ಕಳೆದ ವಾರವಷ್ಟೇ ಮೂರು ಜೀವಂತ ಹೃದಯಗಳ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ 17 ವರ್ಷದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಐವರಿಗೆ ಹೊಸ ಬಾಳು ನೀಡಿದ್ದಾನೆ.

ಆತನ ಅಂಗಾಂಗಗಳನ್ನು ಕುಟುಂಬ ಸದಸ್ಯರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕನ ಹೃದಯವನ್ನು ತಮಿಳುನಾಡಿನ 45 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಕಳೆದ ವಾರ ಮೂವರ ಜೀವಂತ ಹೃದಯಗಳು ಹಾಗೂ ಇತರೆ ಮಹತ್ವದ ಅಂಗಾಂಗಗಳು ದಾನ ನೀಡಲ್ಪಟ್ಟು ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದವು. ಇದರಿಂದ ಪ್ರೇರಣೆ ಪಡೆದಿರುವ 17 ವರ್ಷದ ಯುವಕನ ಪಾಲಕರು, ಮಗನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಇದರಿಂದಾಗಿ, ಒಂದು ವಾರದ ಅಂತದಲ್ಲಿ ಒಟ್ಟು ನಾಲ್ಕು ಜೀವಂತ ಹೃದಯಗಳು ನಾರಾಯಣ ಹೃದಯಾಲಯಕ್ಕೆ ರವಾನೆಯಾದಂತಾಗಿವೆ.

ಡಿಪ್ಲೊಮಾ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಆತನ ಪೋಷಕರು ಯಶವಂತಪುರದಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜು. 30 (ಗುರುವಾರ) ಮೃತಪಟ್ಟ. ಬಳಿಕ ಪೋಷಕರ ಮನವೊಲಿಸಿ ಅಂಗಾಂಗ ದಾನಕ್ಕೆ ಒಪ್ಪಿಸಲಾಯಿತು ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನಂತರ ನಡೆದಿದ್ದು ತುರ್ತು ಚಟುವಟಿಕೆ. ಯಶವಂತಪುರದಲ್ಲಿನ ಆಸ್ಪತ್ರೆಯಿಂದ ಹೊಸೂರು ರಸ್ತೆಯಲ್ಲಿನ ನಾರಾಯಣ ಹೃದಯಾಲಯಕ್ಕೆ ಸಂಚಾರ ಪೊಲೀಸರು ಸಿಗ್ನಲ್ ಮುಕ್ತ ಸಂಚಾರಕ್ಕೆ (ಗ್ರೀನ್ ಕಾರಿಡಾರ್) ಅವಕಾಶ ಕಲ್ಪಿಸಿದರು. ಗೊರಗುಂಟೆಪಾಳ್ಯ ಮಾರ್ಗವಾಗಿ ಕಂಠೀರವ ಸ್ಟುಡಿಯೋ, ಲಗ್ಗೆರೆ, ಪಾಪರೆಡ್ಡಿ ಪಾಳ್ಯ, ನೈಸ್ ರಸ್ತೆ ಮೂಲಕ ಸಿಗ್ನಲ್ ಮುಕ್ತವಾಗಿ 17 ವರ್ಷದ ಯುವಕನ ಹೃದಯ ನಾರಾಯಣ ಹೃದಯಾಲಯದತ್ತ ಸಾಗಿತು.

ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮಿಳುನಾಡು ಮೂಲದ 45 ವರ್ಷದ ವ್ಯಕ್ತಿಗೆ ಹೃದಯ ಜೋಡಣೆ ಕಾರ್ಯ ಆರಂಬಿsಸಿದ ನಾರಾಯಣ ಹೃದಯಾಲಯ ವೈದ್ಯರು ಸತತ ಐದು ತಾಸುಗಳ ಶಸuಉಚಿಕಿತ್ಸೆ ನಡೆಸಿದರು. ಡಾ.ಜುಲಿಸ್ ಪುನ್ನೆನ್, ಡಾ.ಪಿ.ವಿ.ರಾವ್, ಡಾ.ವರುಣ್ ಶೆಟ್ಟಿ, ಡಾ.ಭಗೀರಥ ರಘುರಾಮನ್ ಸೇರಿದಂತೆ ಇತರೆ ತಜ್ಞ ವೈದ್ಯರು ಶಸuಉಚಿಕಿತ್ಸೆ ನಡೆಸಿದರು. ಹೃದಯ ಪಡೆದು ಕೊಂಡ ವ್ಯಕ್ತಿ ಆರೋಗ್ಯವಾಗಿದ್ದು, ಮುಂದಿನ 24 ಗಂಟೆಗಳ ಕಾಲ ಆತನ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಯುವಕನ ಜೀವಂತ ಹೃದಯ ನಾರಾಯಣ ಹೃದಯಾಲಯಕ್ಕೆ ರವಾನೆಯಾದರೆ, ಒಂದು ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಹಾಗೂ ಕಂಗಳು ನಾರಾಯಣ ನೇತ್ರಾಲಯಕ್ಕೆ ರವಾನೆಯಾಗಿವೆ. ಯಕೃತ್‍ನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯವರು ಬಳಸಿಕೊಂಡಿದ್ದಾರೆ. ಈ ಮೂಲಕ ಮೃತ ಯುವಕ ಸತ್ತು ಮತ್ತೆ ಬದುಕಿದಂತಾಗಿದೆ.

SCROLL FOR NEXT