ಬೆಂಗಳೂರು: ಸಿಹಿ ತಿಂಡಿಗಳಿಗೆ ಪ್ರಜ್ಞೆ ತಪ್ಪಿಸುವ ಮಾತ್ರೆ ಬೆರೆಸಿ, ಪರಿಚಿತ ಮಹಿಳೆಯರಿಗೆ ನೀಡಿ ಪ್ರಜ್ಞೆ ತಪ್ಪಿದ ಬಳಿಕ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರು ಸಮೀಪದ ನಾಗೇನಹಳ್ಳಿ ನಿವಾಸಿ ಜ್ಞಾನಪ್ರಕಾಶ್(45) ಬಂಧಿತ ಆರೋಪಿ. ಈತನಿಂದ ರು.4 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, 4 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿದ್ದ ಆರೋಪಿ, ಒಂಟಿಯಾಗಿ ವಾಸವಿರುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರಿಗೆ ಸಿಹಿ ತಿಂಡಿ, ಕೇಕ್ ನೀಡಿ ಪ್ರಜ್ಞೆ ತಪ್ಪಿಸಿ ಮೈ ಮೇಲೆ ಇರುವ ಹಾಗೂ ಮನೆಯಲ್ಲಿರುವ ಚಿನ್ನಾಭರಣ ದೋಚುತ್ತಿದ್ದ. ಮತ್ತಿಕೆರೆ ನಿವಾಸಿ ಪ್ರಮಿಳಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಪ್ರಮಿಳಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮತ್ತಿಕೆರೆಯಲ್ಲಿ ವಾಸಿಸುತ್ತಿದ್ದಾರೆ. ಮೇ 5ರಂದು ಪ್ರಮಿಳಾ ಅವರ ಸ್ನೇಹಿತ ಪ್ರಭಾ ಎಂಬುವರ ಹೆಸರು ಹೇಳಿಕೊಂಡು ಕರೆ ಮಾಡಿದ ಆರೋಪಿ, ತನ್ನ ಅಕ್ಕನ ಮಗಳ ನಾಮಕರಣವಿದೆ. ಆಮಂತ್ರಣ ಪತ್ರಿಕೆ ನೀಡಬೇಕಿದೆ. ಹೀಗಾಗಿ, ಮನೆಗೆ ಬರುತ್ತಿದ್ದೇನೆ ವಿಳಾಸ ನೀಡಿ ಎಂದು ಪ್ರಮಿಳಾ ಅವರಿಗೆ ಕೇಳಿದ್ದ. ವಿಳಾಸ ತಿಳಿದುಕೊಂಡು, ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದಿದ್ದ. ತನ್ನ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದ್ದು ಸ್ವೀಟ್ ಹಂಚುತ್ತಿರುವುದಾಗಿ ಹೇಳಿ ಕೇಕ್ ನೀಡಿದ್ದಾನೆ. ಅದನ್ನು ನಂಬಿದ ಪ್ರಮಿಳಾ ಆರೋಪಿ ನೀಡಿದ ಕೇಕ್‍ನ್ನು ಮಗಳಿಗೂ ತಿನ್ನಲು ನೀಡಿ ತಾವು ತಿಂದಿದ್ದರು.
ಸ್ವಲ್ಪ ಹೊತ್ತಿನಲ್ಲೇ ಪ್ರಮಿಳಾ ಅವರಿಗೆ ಪ್ರಜ್ಞೆ ತಪ್ಪಿತ್ತು. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡಾಗ ಮೊಬೈಲ್ ಫೋನ್ ಸೇರಿದಂತೆ ಮನೆಯಲ್ಲಿದ್ದ ಆಭರಣಗಳು ಕಾಣೆಯಾಗಿದ್ದವು. ಹೀಗಾಗಿ,
ಪ್ರಕಾಶನ ಮೇಲೆ ಅನುಮಾನಗೊಂಡ ಪ್ರಮಿಳಾ ಅವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊಬೈಲ್ ಫೋನ್ ಕರೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದಾಗ ಪ್ರಮಿಳಾ ಅವರಿಗೆ ವಂಚನೆ ಮಾಡಿದ್ದಲ್ಲದೇ, ನಗರದ ಮಡಿವಾಳ, ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕೆಲವರ ಮನೆಗಳಲ್ಲೂ ಇದೇ ಮಾದರಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಇನ್ನು ಎಷ್ಟು ಜನರಿಗೆ ಈ ರೀತಿ ವಂಚಿಸಿ ಚಿನ್ನಾಭರಣ ದೋಚಿದ್ದಾನೆ ಎನ್ನುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಕೃತ್ಯ ಎಸಗಿದ ಬಳಿಕ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಆದರೆ, ಇದುವರೆಗೂ ಯಾರಿಂದಲೂ ಅಂತಹ ದೂರುಗಳು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ.