ಬೆಂಗಳೂರು: ಅಗರ ಮತ್ತು ಬೆಳ್ಳಂದೂರು ಕೆರೆಗಳ ರಾಜಕಾಲುವೆ ಜಾಗಒತ್ತುವರಿ ಮಾಡಿ ಮಂತ್ರಿ ಟೆಕ್‍ಝೋನ್ ಪ್ರೈ.ಲಿ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್ ಆ್ಯಂಡ್ ಸರ್ವಿಸ್ ಪೈ.ಲಿ ವಾಣಿಜ್ಯ ಕಟ್ಟಡ ನಿರ್ಮಿಸಿರುವುದಾಗಿ ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ಇತ್ಯರ್ಥಪಡಿಸಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿ ವಿವಿಧ ಗೃಹ ನಿರ್ಮಾಣ ಸಂಘಗಗಳು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಈ ವಿವಾದ ಕುರಿತ ಪ್ರಕರಣ ರಾಷ್ಟ್ರೀಯ ಹಸಿರು ಪೀಠದ ಮುಂದೆ ಬಾಕಿ ಉಳಿದಿದೆ. ಹೀಗಾಗಿ ಹಸಿರು ಪೀಠದಲ್ಲಿ ಪ್ರಕರಣ ಇತ್ಯರ್ಥವಾದ ನಂತರ, ಯಾವುದೇ ವಿವಾದಗಳು ಇದ್ದಲ್ಲಿ ಮತ್ತೆ ಈ ಕೋರ್ಟ್ ಮೊರೆ ಹೋಗಹುದು ಎಂದು ಅರ್ಜಿದಾರರಿಗೆ ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು. ಈ ಹಿಂದೆ ಈ ಎರಡು ಸಂಸ್ಥೆಗಳು ರಾಜ ಕಾಲುವೆ ಜಾಗ ಒತ್ತುವರಿ ಮಡಿರುವುದಾಗಿ ಆರೋಪಿಸಿ ದಿ ಫಾರ್‍ವರ್ಡ್ ಫೌಂಡೇಶನ್ ಸೇರಿ ಮೂರು ಸಂಘ ಸಂಸ್ಥೆಗಳು ರಾಷ್ಟ್ರೀಯ ಹಸಿರು ಪೀಠದಲ್ಲಿ (ಎನ್‍ಜಿಟಿ)ಅರ್ಜಿ ದಾಖಲಿಸಿದ್ದಾಗೆ ಮಂತ್ರಿ ಟೆಕ್‍ಝೋನ್ ಸಂಸ್ಥೆಗೆ ರು.117.35 ಕೋಟಿ ಮತ್ತು ಕೋರ್ ಮೈಂಡ್ ಸಂಸ್ಥೆಗೆ ರು.22.5 ಕೋಟಿ ದಂಡ ವಿಧಿಸಿತ್ತು. ಈ ಮೊತ್ತವನ್ನು ರಾಜ್ಯ ಪರಿಸರ ಮಾಲಿನ್ಯನಿಯಂತ್ರಣ ಮಂಡಳಿಗೆ ಇನ್ನೆರಡು ವಾರದಲ್ಲಿ ಪಾವತಿಸುವಂತೆ ಕಳೆದ ಮೇ 7ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಎನ್‍ಜಿಟಿ ಆದೇಶಕ್ಕೆ ತಡೆಯಾಜ್ಞೆನೀಡಿತ್ತು.