ಬೆಂಗಳೂರು: ಕಳಸ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕ್ಯಾತೆ ತೆಗೆದಿರುವ ಗೋವಾ ಸರ್ಕಾರದ ನೀತಿ ವಿರುದ್ಧ ರಾಜ್ಯ ಮತ್ತು ಕೇಂದ್ರ ಗಮನ ಸೆಳೆಯಲು ಜೂನ್ 27ರಂದು ಕನ್ನಡ ಒಕ್ಕೂಟದಿಂದ ಗೋವಾ ಮುತ್ತಿಗೆ ಚಳವಳಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಗೋವಾ ಸರ್ಕಾರ ಕನ್ನಡಿಗರಿಗೆ ನೀರು ಕೊಡದೆ, ತಡೆಯೊಡ್ಡಿದೆ. ಈ ಕುರಿತು ನಮ್ಮ ಸರ್ಕಾರ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ, ಇದರಿಂದಾಗಿ ಉತ್ತರ ಕರ್ನಾಟಕದ ಜನತೆಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಹುಬ್ಬಳ್ಳಿಯಿಂದ ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳಿ ಜೂ. 27ರಂದು ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಎಲ್ಲ ಕನ್ನಡಪರ ಸಂಘಟನೆಗಳು ವ್ಯಾಪಕವಾಗಿ ಬೆಂಬಲ ನೀಡಿ ಹೋರಾಟದಲ್ಲಿ ಭಾಗಿಯಾಗಬೇಕು'' ಎಂದು ಮನವಿ ಮಾಡಿದರು.
ಕುಡಿಯುವ ನೀರಿನ ವಿಚಾರದಲ್ಲಿ ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಸಂಬಂಧ ಆಯಾ ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೋರಾಟ ನಡೆಸಿ, ನಮ್ಮ ನೀರನ್ನು ಕಿತ್ತುಕೊಳ್ಳುತ್ತಿವೆ. ಹಾಗಾಗಿ, ಇಂಥ ವಿಚಾರದಲ್ಲಿ ರಾಜ್ಯ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಯಲಲಿತಾ ಕ್ಯಾತೆ ತೆಗೆದರೆ ತಮಿಳು ಚಿತ್ರಗಳಿಗೆ ಬಹಿಷ್ಕಾರ
ತಮಿಳುನಾಡು ಸರ್ಕಾರ ವಿನಾಕಾರಣ ಮೇಕೆದಾಟು ಯೋಜನೆ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದೆ. ಮುಖ್ಯಮಂತ್ರಿ ಜಯಲಲಿತಾ ಸಣ್ಣತನವನ್ನು ಪ್ರದರ್ಶಿಸುತ್ತಿದ್ದಾರೆ. ಇದೇ ರೀತಿ ಜಯಲಲಿತಾ ಮಂಡುತನ ಮುಂದುವರೆಸಿದರೇ, ರಾಜ್ಯದಲ್ಲಿ ತಮಿಳು ಚಿತ್ರಗಳಿಗೆ ಬಹಿಷ್ಕಾರ, ತಮಿಳ್ ಚಾನೆಲ್ ಬಂದ್ ಮಾಡಲಾಗುವುದು ಎಂದು ವಾಟಾಳ್ ಎಚ್ಚರಿಸಿದ್ದಾರೆ.
ಅಲ್ಲದೇ, ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮೇಕೆದಾಟು ಯೋಜನೆಗೆ ಶಂಕಸ್ಥಾಪನೆ ದಿನವನ್ನು ನಿಗದಿ ಪಡಿಸಬೇಕು, ಇಲ್ಲವಾದರೆ, ಕನ್ನಡಪರ ಸಂಘಟನೆಗಳೇ ಶಂಕಸ್ಥಾಪನೆ ಮಾಡಲಿವೆ ಎಂದ ಅವರು, ವಿಧಾನಸಭೆಯಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.