ಜಿಲ್ಲಾ ಸುದ್ದಿ

ಪ್ರತ್ಯೇಕತೆ ಬಗ್ಗೆ ಮಾತಾಡುವವರೆಲ್ಲ ಹುಚ್ಚರೇನಲ್ಲ: ಚಂದ್ರಶೇಖರ್ ಪಾಟೀಲ

ಬೆಂಗಳೂರು: ರಾಜ್ಯದ ಉತ್ತರ ಭಾಗವನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶದಿಂದ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದ್ದು, ಪ್ರತ್ಯೇಕತೆ ಬಗ್ಗೆ ಮಾತನಾಡುವವರೆಲ್ಲರೂ ಹುಚ್ಚರೇನಲ್ಲ ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ ಪ್ರತಿಪಾದಿಸಿದರು.

ಕರ್ನಾಟಕ ರಣಧೀರ ಪಡೆ ಭಾನುವಾರ ಆಯೋಜಿಸಿದ್ದ `ಉತ್ತರ ಕರ್ನಾಟಕದ ಅಭಿವೃದ್ಧಿ-ಒಂದು ಚಿಂತನಾ ಸಭೆ' ಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗ ಪ್ರತ್ಯೇಕವಾಗದೆ ಅಖಂಡವಾಗಿ ಉಳಿಯಬೇಕು. ರಾಜ್ಯ ಸರ್ಕಾರ ಉತ್ತರ ಭಾಗವನ್ನು ಕಡೆಗಣಿಸಿರುವುದರಿಂದಲೇ ಪ್ರತ್ಯೇಕತೆಯ ಕೂಗು ಆರಂಭವಾಗಿದೆ. ಜನರಿಗೆ ಸೌಲಭ್ಯ ನೀಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ ನಡುವೆ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ಆದರೆ, ಪ್ರತ್ಯೇಕತೆಯ ಬಗ್ಗೆ ಮಾತನಾಡುವವರೆಲ್ಲರೂ ಹುಚ್ಚರು ಎಂದು ಜರಿಯುವುದು ಸರಿಯಲ್ಲ ಎಂದರು.

ಉತ್ತರ ಕರ್ನಾಟಕದಿಂದಲೇ ಆರಂಭವಾದ ಏಕೀಕರಣ ಚಳವಳಿ ಅಂತ್ಯಗೊಂಡು 60 ವರ್ಷ ಕಳೆದಿದೆ. ಆದರೂ ನ್ಯಾಯವಾಗಿ ಪಡೆಯಬೇಕಾದ ಹಕ್ಕುಗಳಿಗಾಗಿ ಹೋರಾಟ ಮಡಬೇಕಾದ ಅನಿವಾರ್ಯ ಉಂಟಾಗಿದೆ. ಸರೋಜಿನಿ ಮಹಿಷಿ ವರದಿ, ಪ್ರೊ.ನಂಜುಂಡಪ್ಪ ವರದಿ ಅನುಷ್ಠಾನವಾಗದೆ ಉಳಿದಿವೆ. ಒಂದೇ ಕಡೆಯಲ್ಲಿ ರಾಜಕೀಯ ಶಕ್ತಿ ಕೇಂದ್ರೀಕರಣವಾಗಿದ್ದು, ಉತ್ತರ ಭಾಗಕ್ಕೆ ಸೌಲಭ್ಯ ದೊರೆಯುತ್ತಿಲ್ಲ ಎಂದು ಚಂಪಾ ವಿಷಾದಿಸಿದರು.

ಉತ್ತರ ಕರ್ನಾಟಕದ ಹೋರಾಟಕ್ಕಾಗಿ ಒಂದೇ ಆಗಿದ್ದ ಹಲವು ಸಂಘಟನೆಗಳು ಒಡೆದಿದ್ದು, ಊರಿಗೊಂದು ಸಂಘಗಳು ಹುಟ್ಟಿಕೊಂಡಿವೆ. ಸಂಘಟನೆಗಳು ಚೂರಾಗಿ ಸಂಖ್ಯೆ ಹೆಚ್ಚಾಗುವುದು ಉತ್ತಮ ಬೆಳವಣಿಗೆ. ಇದರಿಂದ ಶಕ್ತಿಯ ವಿಕೇಂದ್ರೀಕರಣವಾಗುತ್ತದೆ. ಬೇರೆ ವಿಧದಲ್ಲಿ ಹೋರಾಟ ನಡೆದರೂ ಉದ್ದೇಶ ಒಂದೇ ಆಗಿರಬೇಕು. ಹೋರಾಟಕ್ಕೆ ಉತ್ತಮ ಚಿಂತನೆಯ ಬೆಂಬಲವಿರಬೇಕು ಎಂದು ಕಿವಿಮಾತು ಹೇಳಿದರು.

ಭೌಗೋಳಿಕವಾಗಿ ಗುರುತಿಸಿ: ಉತ್ತರ ಕರ್ನಾಟಕದ ಭಾಗವನ್ನು ಜಾತಿ, ಧರ್ಮದ ಹೆಸರಿನ ಬದಲು ಭೌಗೋಳಿಕವಾಗಿ ಗುರುತಿಸಿ ಹೋರಾಟ ಮಾಡುವುದು ಸೂಕ್ತ. ಉತ್ತರ ಕರ್ನಾಟಕಕ್ಕೆ `ಕಿತ್ತೂರು ಕರ್ನಾಟಕ', `ಕಲ್ಯಾಣ ಕರ್ನಾಟಕ' ಎಂದು ಹೆಸರಿಟ್ಟರೆ ಜಾತಿ, ಧರ್ಮಗಳ ಘಾಟು ಬರುತ್ತದೆ. ಆದ್ದರಿಂದ ಸರ್ಕಾರ ಕಡೆಗಣಿಸಿರುವ ಈ ಭಾಗವನ್ನು ಭೌಗೋಳಿಕವಾಗಿ ಗುರುತಿಸಬೇಕು ಎಂದು ಚಂಪಾ ಅಭಿಪ್ರಾಯಪಟ್ಟರು. ಡಾ. ಚಿದಾನಂದಮೂರ್ತಿ ಅವರು ಹೇಳುವಂತೆ ಉತ್ತರ ಕರ್ನಾಟಕದ ಭಾಗಕ್ಕೆ `ಕಿತ್ತೂರು ಕರ್ನಾಟಕ', `ಕಲ್ಯಾಣ ಕರ್ನಾಟಕ' ಎಂದು ಹೆಸರಿಟ್ಟರೆ, ಧರ್ಮ ಹಾಗೂ ಜಾತಿಗಳ ವಿವಾದ ಆರಂಭವಾಗುತ್ತದೆ. ಅಂದರೆ ಮೈಸೂರು ಭಾಗಕ್ಕೆ `ಟಿಪ್ಪು ಕರ್ನಾಟಕ' ಎಂದು ಕೂಡಾ ಹೆಸರಿಡಬಹುದು.ಇದರಿಂದ ವಿವಾದ ಇನ್ನೂ ಹೆಚ್ಚುತ್ತದೆ.ಹೀಗಾಗಿ ಹೈದರಾಬಾದ್ ಕರ್ನಾಟಕವನ್ನು ಈಶಾನ್ಯ ಕರ್ನಾಟಕ, ಉಳಿದ ಭಾಗವನ್ನು ಮಧ್ಯ ಹಾಗೂ ಉತ್ತರ ಕರ್ನಾಟಕ ಎಂದು ಕರೆಯಬಹುದು ಎಂದರು.

ಸಿಪಿಎಂ ಸದಸ್ಯ ಜಿ.ಎನ್. ನಾಗರಾಜ್ ಮಾತನಾಡಿ, ಭೂ ಸುಧಾರಣೆಯಲ್ಲಿ ಅಸಮಾನತೆ ಸೃಷ್ಟಿಯಾಗಿದ್ದರಿಂದ ಉತ್ತರ ಭಾಗದ ಜಿಲ್ಲೆಗಳಲ್ಲಿ ಕೆಲವರು ಮಾತ್ರ ಶ್ರೀಮಂತರಾಗಿದ್ದಾರೆ. ಕೂಲಿ ಕಾರ್ಮಿಕರು, ಬಡವರು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಬಂದು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಜನರು ಮುಂಬೈಗೆ ಹೋದರೆ ಬೆಂಗಳೂರಿನಂತೆ ಅಲ್ಲಿಯೂ ನಗರ ಅಭಿವೃದ್ಧಿಯಾಗುತ್ತದೆ. ಆದರೆ, ಈ ಭಾಗದ ಜನರು ತಮ್ಮ ಊರಿನಲ್ಲೇ ನೆಲೆಯೂರಿ ಅಭಿವೃದ್ಧಿಹೊಂದಲು ರಾಜಕಾರಣಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ಪತ್ರಕರ್ತ ಲಕ್ಷಣ್ ಹೂಗಾರ್, ಸಂಘಟನೆಯ ಸಂಚಾಲಕರಾದ ವೆಂಕಟೇಶ್, ರಮಾನಂದ ಅಂಕೋಲಾ ಹಾಜರಿದ್ದರು.

SCROLL FOR NEXT