ಜಿಲ್ಲಾ ಸುದ್ದಿ

ದನದ ಕೊಟ್ಟಿಗೆಯಲ್ಲಿತ್ತು 18 ಕೆಜಿ ಚಿನ್ನ..!

Srinivasamurthy VN

ಕೋಲಾರ: ಆಭರಣ ಮಳಿಗೆಯೊಂದರಲ್ಲಿ ದರೋಡೆ ಮಾಡಿ ಬರೋಬ್ಬರಿ 18 ಕೆಜಿ ಚಿನ್ನವನ್ನು ದನದ ಕೊಟ್ಟಿಗೆಯಲ್ಲಿಟ್ಟಿದ್ದ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.

ಸ್ನೇಹಿತರಿಂದ ಚಿನ್ನವನ್ನು ತೆಗೆದುಕೊಂಡು ಬರುತ್ತಿದ್ದ ಆಭರಣ ಮಾಲೀಕರನ್ನು ಯಾಮಾರಿಸಿ ಅವರ ಕಾರಿನ ಚಾಲಕನೇ ಚಿನ್ನ ಕದ್ದೊಯ್ದು ದನದ ಕೊಟ್ಟಿಗೆಯೊಳಗೆ ಬಂಧಿಸಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಓಂ ಜ್ಯುವೆಲರ್ಸ್ ಮಾಲೀಕ ರಾಜೇಶ್ ಭಟ್ ಅವರಿಗೆ ಸೇರಿದ ಸುಮಾರು 18 ಕೆಜಿ ಚಿನ್ನವನ್ನು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ ಭಟ್ ಅವರ ಕಾರು ಚಾಲಕ ಮತ್ತು ಪ್ರಕರಣದ ಪ್ರಮುಖ ಆರೋಪಿ ಬಾಬುವಿಗಾಗಿ ಹುಡುಕಾಟ ಮುಂದುವರೆದಿದೆ. ಜೂನ್ 6ರಂದು ರಾಜೇಶ್ ಭಟ್ ತಮ್ಮ ಸ್ನೇಹಿತರ ಜೊತೆ ಕೋಲ್ಕತ್ತಾದಿಂದ 18 ಕೆಜಿ ಚಿನ್ನವನ್ನು ತರುತ್ತಿದ್ದರು. ಕೋಲಾರ ಸಮೀಪದ ಅಡಿಗಾಸ್ ಹೋಟೆಲ್‌ನಲ್ಲಿ ಊಟಕ್ಕೆ ತೆರಳಿದ್ದಾಗ, ಕಾರು ಚಾಲಕ ಬಾಬು ಚಿನ್ನದೊಂದಿಗೆ ಪರಾರಿಯಾಗಿದ್ದ. ಬಳಿಕ 3 ದಿನಗಳ ಬಳಿಕ ಕಾರು ಪತ್ತೆಯಾಗಿತ್ತು. ಕೋಲಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಚಿಕ್ಕಮಗಳೂರು ಪೊಲೀಸರ ಸಹಕಾರದಿಂದ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಕೋಲಾರ ಪೊಲೀಸರು, ಶಿವಕುಮಾರ್, ವಿಶ್ವನಾಥ್, ಮನ್ಸೂರ್, ಅಮ್ಜದ್ ಎಂಬುವವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು ಹೊರವಲಯದ ದನದ ಕೊಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದನದ ಕೊಟ್ಟಿಗೆ ಅಮ್ಜದ್ ಅವರಿಗೆ ಸೇರಿದ್ದಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಬಾಬು ಉಳಿದ ಚಿನ್ನದ ಜೊತೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

SCROLL FOR NEXT