ಬೆಂಗಳೂರು: ಅನ್ನಭಾಗ್ಯ ಯೋಜನೆಯಿಂದಾಗಿ ಜನರು ಸೋಮಾರಿಗಳಾಗುತ್ತಾರೆ ಎಂದಿರುವ ಡಾ:ಎಸ್.ಎಲ್.ಭೈರಪ್ಪ, ಡಾ.ದೇ.ಜವರೇಗೌಡ, ಡಾ.ಕುಂ.ವೀರಭದ್ರಪ್ಪ ಅವರ ಹೇಳಿಕೆ ಅಮಾನವೀಯವಾಗಿದೆ ಎಂದು ಚಿಂತಕ ಡಾ: ಕೆ. ಮರಳಸಿದ್ದಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡದ ಅವರು, ಸಾಹಿತಿಗಳಾಗಿರುವುರೇ ಶ್ರಮಿಕ ವರ್ಗಕ್ಕೆ ಅಪಮಾನ ಮಾಡಿದ್ದಾರೆ. ಇದು ಮಾನವೀಯತೆ ಇಲ್ಲದ ಟೀಕೆ. ಇವರು ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಮೂವರೂ ಹಳ್ಳಿಗಳಲ್ಲಿ ಜಮೀನು ಇಟ್ಟುಕೊಂಡಿದ್ದು, ಅವರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎಂಬ ಭೀತಿಯಿಂದ ಈ ಟೀಕೆಗಳನ್ನು ಮಾಡುತ್ತಿದ್ದಾರೆ ಬಡವರು ಖುಷಿಯಾಗಿರಬಾರದು ಎಂದು ಬಯಸುವ ಈ ದೊಡ್ಡ ಮನುಷ್ಯರು ಸಂವೇಧನಾರಹಿತರಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆಯೂ ಸಾಮಾಜಿಕ ಭದ್ರತೆ ಕಾರ್ಯಕ್ರಮ ಇತ್ತು. ಬಿ.ಎಸ್.ಯಡಿಯೂರಪ್ಪ, ತಮಿಳುನಾಡಿನ ಜಯಲಲಿತಾ ಅವರು ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಆದರೆ ಆಗ ಮೌನವಾಗಿದ್ದ ಇವರು ಈಗ ಅಸಹನೆ ತೋರುತ್ತಿದ್ದಾರೆ. ಇದು ಸಿನಿಕತನದ ಪರಮಾವಾಧಿ. ಬಸವಣ್ಣ ಮತ್ತು ಕುವೆಂಪು ಅವರನ್ನು ಆದರ್ಶವಾಗಿಟ್ಟುಕೊಂಡ ಜವರೇಗೌಡರಿಂದ ಇಂತಹ ಹೇಳಿಕೆ ಸರಿಯಲ್ಲ. ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿದವರು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯನ್ನು ಪೇಜಾವರ ಸ್ವಾಮೀಜಿ, ಬಿ.ಎಸ್. ಯಡಿಯೂರಪ್ಪ ಅವರೂ ಪ್ರಶಂಸಿಸಿದ್ದಾರೆ. ಆದರೆ ಸಾಹಿತಿಗಳಾದ ಇವರಿಗೆ ಆತ್ಮಸಾಕ್ಷಿ ಇಲ್ಲದ ಕಾರಣ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಈ ಮೂವರು ಸಾಹಿತಿಗಳು ಹುಟ್ಟಿನಿಂದಲೇ ಶ್ರೀಮಂತರಲ್ಲ. ಗ್ರಾಮೀಣ ಹಿನ್ನೆಲೆಯಿಂದ ಬಂದ ಇವರಿಗೆ ಹಸಿವಿನ ತೀವ್ರತೆ ಗೊತ್ತಿದೆ. ಗೊತ್ತಿದ್ದೂ ಇಂತಹವರು ಈ ರೀತಿಯ ಹೇಳಿಕೆ ನೀಡಿರುವುದು ದೊಡ್ಡ ದುರಂತ ಎಂದರು.
ಡಾ.ಎಸ್.ಎಲ್.ಭೈರಪ್ಪ ಅವರು ವಾರಾನ್ನ ಮಾಡಿಕೊಂಡು ಶಿಕ್ಷಣ ಪಡೆದವರು. ಹಸಿವಿನ ಜೊತೆಗೆ ಅವಮಾನವನ್ನು ಅನುಭವಿಸಿದವರು. ಅವರೇ ಬಡವರಿಗೆ ಅಪಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜವರೇಗೌಡರು ಸಹ ಬಡತನದಿಂದ ಮೇಲೆ ಬಂದವರಾಗಿದ್ದಾರೆ. ಗುಡಿಸಲಿನಿಂದ ಗಂಗೋತ್ರಿಗೆ ಬಂದ ಬವಣೆಯನ್ನು ತಮ್ಮ ಆತ್ಮಕಥೆಯಲ್ಲಿ ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ. ಕುಂ.ವೀ. ಹಸಿವಿನ ಬಗ್ಗೆ ಅನೇಕ ಕತೆಗಳನ್ನು ಬರೆದವರು. ಇಂತಹವರು ಸ್ವಾರ್ಥ ಸಾಧನೆಗಾಗಿ, ವೈಯಕ್ತಿಕ ಲಾಭಗಳಿಗಾಗಿ ಶ್ರಮಜೀವಿಗಳಿಗೆ ಅವಮಾನ ಮಾಡಿರುವುದು ವಿಷಾದನೀಯ ಹಾಗೂ ಆಘಾತಕಾರಿ ಎಂದು ಅವರು ಹೇಳಿದರು.