ಜಿಲ್ಲಾ ಸುದ್ದಿ

ಮಳೆಗೆ ಮರ ಉರುಳಿ 7 ಬಲಿ

ಬೆಂಗಳೂರು: ತಡವಾಗಿ ಆಗಮಿಸಿದರೂ ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮುಂಗಾರು ಮಳೆ ಭಾರಿ ಅನಾಹುತ ಸೃಷ್ಟಿಸಿದೆ.

ಮೂರು ಪ್ರತ್ಯೇಕ ಘಟನೆಗಳಲ್ಲಿ ಮರ ಉರುಳಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಕಲೇಶಪುರ, ಮೂಡಿಗೆರೆ ತಾಲೂಕಿನಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಯಾತ್ರೆ ಮುಗಿಸಿ ವಾಪಸ್ ಬರುತ್ತಿದ್ದ ಟೆಂಪೋ ಟ್ರ್ಯಾಕ್ಸ್ ಮೇಲೆ ಮಡಿಕೇರಿ ಸಮೀಪ ಬೋಯಿಕೇರಿ ಬಳಿ ಮರ ಉರುಳಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮಂಡ್ಯ ನಿವಾಸಿಗಳಾದ ಮಂಜುಳಾ (35), ರಮೇಶ್ (38) ನಾಗಮ್ಮ (50), ಚಿಕ್ಕಣ್ಣ (27), ಜಯಮ್ಮ(60) ಎಂದು ಗುರುತಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿರುವ ನಾಗಲಕ್ಷ್ಮೀ (25), ಅರುಣ (25), ಪ್ರೇಮಾ (38), ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಧರ್ಮ ಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ತೆರಳಿದ್ದ 12 ಜನರ ತಂಡ ಮಡಿಕೇರಿಯ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ನಂತರ ಮಂಡ್ಯಕ್ಕೆ ವಾಪಸ್ ಬರುತ್ತಿದ್ದಾಗ ಮಡಿಕೇರಿ ಸಮೀಪ ಬೋಯಿ ಕೇರಿಯಲ್ಲಿ ಭಾರಿ ಗಾಳಿ ಮಳೆಗೆ ಮರವೊಂದು ವಾಹನದ ಮೇಲೆಯೇ ಉರುಳಿ ಬಿದ್ದಿದ್ದರಿಂದ ಅನಾಹುತ ಸಂಭವಿಸಿದೆ.

ಸಕಲೇಶಪುರ ತಾಲೂಕಿನ ನವಿಲಹಳ್ಳಿಯ ಶರತ್(24) ಬಾಳ್ಳುಪೇಟೆಯಿಂದ ಬೈಕ್‍ನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿರುವಾಗ ಹೊಸಕೆರೆ ಸಮೀಪ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಳೆಹೊನ್ನೂರು ಪಟ್ಟಣ ಸಮೀಪದ ಕೊಪ್ಪ-ಶೃಂಗೇರಿ ರಸ್ತೆಯ ಜವಾಹರ್ ನವೋದಯ ಸೀಗೋಡು ತಿರುವಿನ ಬಳಿ ಚಿಕ್ಕಮಗಳೂರು ಕಡೆಗೆ ಕಾಫಿ ಮೂಟೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಮೇಲೆ ಮರವೊಂದು ಬುಡ ಸಮೇತ ಉರುಳಿ ಬಿದ್ದಿದ್ದರಿಂದ ಚಾಲಕ ವಿಜಯಪುರದ ಅಖಿಲ್ (45) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹೋಬಳಿಯಾದ್ಯಂತ ನಿರಂತರ ಗಾಳಿ ಮಳೆ ಸುರಿಯುತ್ತಿದ್ದು, ಹಲವೆಡೆ ಬೃಹತ್ ಗಾತ್ರದ ಮರಗಳು ಬುಡ ಸಮೇತ ಉರುಳಿ ಬಿದ್ದಿವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸಂಚಾರಕ್ಕೆ ತೊಂದರೆಯಾಗಿದೆ.

ಸಕಲೇಶಪುರ ತಾಲೂಕಿನಲ್ಲಿ ಕಳೆದ 48 ಗಂಟೆಗಳಲ್ಲಿ 300 ಮಿಮೀ ಮಳೆಯಾಗಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಭಾರಿ ಗಾಳಿ ಬೀಸುತ್ತಿರುವುದರಿಂದ 300ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನಲ್ಲಿ ಹೆಚ್ಚಳವಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಪ್ರವಾಹ ಸ್ಥಿತಿಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಭಾಗಮಂಡಲದಲ್ಲಿ 240 ಮಿ.ಮೀ. ಮಳೆಯಾಗಿದೆ. ಕಾವೇರಿ ನದಿ ನೀರು ನುಗ್ಗಿ ಹೊಲಗದ್ದೆಗಳು ಜಲಾವೃತವಾಗಿದೆ. ಮಡಿಕೇರಿಯಿಂದ ಭಾಗಮಂಡಲಕ್ಕೆ ಸಾಗುವ ರಸ್ತೆಯಲ್ಲಿ ಬೆಟ್ಟಗೇರಿ, ಚೇರಂಬಾಣೆಗಳಲ್ಲಿ ರಸ್ತೆ ಮಧ್ಯೆ ಭಾರಿ ಗಾತ್ರದ ಮರಗಳು ಬಿದ್ದು ಸಂಚಾರ ಸ್ಥಗಿತಗೊಂಡಿದೆ.

ಮಲೆನಾಡು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನೂರಾರು ಮರಗಳು, 200ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಶಾಲಾ ಕಾಲೇಜುಗಳಿಗೆ ರಜೆ: ಬಿಡದೆ ಸುರಿಯುತ್ತಿರುವ ಮಳೆಯಿಂದ ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಉಭಯ ತಾಲೂಕುಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಹಲವೆಡೆ ಮರಗಳು ಧರೆಗುರುಳಿ ಸಂಚಾರಕ್ಕೆ ವ್ಯತ್ಯಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT