ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಗಿರಿ ಉಪಯೋಜನೆ ಗಾತ್ರದ ಶೇ.93 .5 ರಷ್ಟು ದಾಖಲೆ ಅನುದಾನ ಬಳಕೆ ಮಾಡಿಕೊಡಿರುವ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ನಿವಾಸ ಯೋಜನೆ ಎಂಬ ಹೆಸರಿನಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಗೃಹಭಾಗ್ಯ ಕಲ್ಪಿಸುವುದಕ್ಕೆ ಮುಂದಾಗಿದೆ.
ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೆ ಕೆಲವೇ ಗಂಟೆಗೆ ಮುನ್ನ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಈ ಯೋಜನಾ ವಿವರಗಳನ್ನು ಪ್ರಕಟಿಸಿದ್ದು ಒಟ್ಟು 2 ,400 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಬಡವರು ನಿರ್ಗತಿಕರು ಅಲೆಮಾರಿಗಳಿಗೆ ಮನೆ ನಿರ್ಮಿಸಿಕೊಡುವುದಕ್ಕಾಗಿ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ನಿವಾಸ ಎಂಬ ಯೋಜನೆ ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ.
ಈ ಯೋಜನೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು, ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 50 ಸಾವಿರ ಮನೆಗಳನ್ನು ವಸತಿರಹಿತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ನಿರ್ಮಿಸಿ ಕೊಡಲಾಗುವುದು. ಗ್ರಾಮಾಂತರ ಪ್ರದೇಶಗಳ ಮನೆಗೆ 1 .80 ಲಕ್ಷ ಅನುದಾನ ನಿಗದಿ ಮಾಡಲಾಗಿದೆ. ಇಂಥ ವ್ಯಕ್ತಿಗಳಿಗೆ ನಿವೇಶನ ಇಲ್ಲವಾದರೆ ಸರ್ಕಾರವೇ ಜಾಗ ಖರೀದಿಸಿ ಬಡಾವಣೆ ನಿರ್ಮಿಸಿ ಮನೆಗಳನ್ನು ಕಟ್ಟಿಕೊಡುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸೂರು ಇಲ್ಲದೇ ಬೀದಿಯಲ್ಲಿ ಇರುವುದಕ್ಕೆ ಅವಕಾಶ ನೀಡಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.
ವಿಶೇಷ ಯೋಜನೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಬದ್ಧತೆಯ ಫಲವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ವಿಶೇಷ ಉಪಯೋಜನೆಯನ್ನು ಆರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 16 ,356 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.