ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ಕುಟುಂಬಸ್ಥರಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ನೈತಿಕಹೊಣೆ ಹೊತ್ತು ನ್ಯಾ.ಭಾಸ್ಕರ್ ರಾವ್ ಅವರು ರಾಜಿನಾಮೆ ಕೊಡಬೇಕು, ಇಲ್ಲವಾದರೇ, ಲೋಕಾಯುಕ್ತ ಕಚೇರಿ ಮತ್ತು ಭಾಸ್ಕರ್ ರಾವ್ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ಘೇರಾವ್ ಮಾಡಲಾಗುತ್ತದೆ ಎಂದು ಕರ್ನಾಟಕದ ಆಮ್ ಆದ್ಮಿ ಪಕ್ಷ ಎಚ್ಚರಿಸಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವವರಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ. ಈ ಸಂಬಂಧ ಉಪಲೋಕಾಯುಕ್ತರು ತನಿಖೆಗೆ ಆಗ್ರಹಿಸಿದ್ದರು. ಲೋಕಾಯುಕ್ತರ ಕೆಳಪಟ್ಟ ಅಧಿಕಾರಿಗಳೇ ತನಿಖೆ ನಡೆಸುವುದರಿಂದ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಭಾಸ್ಕರ್ ರಾವ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಪ್ ರಾಜ್ಯಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಬೇಕಾದ ಸಂಸ್ಥೆಯ ಮುಖ್ಯಸ್ಥರೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಭಾಸ್ಕರ್ ರಾವ್ ಅವರು ಅನರ್ಹ ಮತ್ತು ನಿಷ್ಕ್ರಿಯ ವ್ಯಕ್ತಿ. ಮಾದ್ಯಮಗಳ ವರದಿ ಪ್ರಕಾರ ಅಶ್ವಿನ್ ರಾವ್ ಮತ್ತು ಕೃಷ್ಣರಾವ್ ಎಂಬುವವರು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರಿಗೆ 1 ಲಂಚ ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹಾಗಿದ್ದರೆ, ಈ ಅಶ್ವಿನ್ ರಾವ್ ಮತ್ತು ಕೃಷ್ಣರಾವ್ ಯಾರು ಎಂಬ ಪ್ರಶ್ನೆಗೆ ಲೋಕಾಯುಕ್ತರು ಉತ್ತರಿಸಬೇಕು ಎಂದು ಅವರು ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಪಿಆರ್ ಒ ರಿಯಾಜ್ ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ, ಈ ಹಿನ್ನಲೆಯಲ್ಲಿ ಸರ್ಕಾರ ಅವರನ್ನು ಅಮಾನತುಗೊಳಿಸಬೇಕು ಎಂದ ಅವರು, ರಾಜ್ಯಪಾಲರು ಈ ಕುರಿತು ಕ್ರಮಕೈಗೊಳ್ಳಬೇಕು ಹಾಗೂ ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಆದೇಶಿಸಿದ್ದಾರೆ. ಲೋಕಾಯುಕ್ತರು ಸೋಮವಾರದೊಳಗೆ ರಾಜಿನಾಮೆ ನೀಡದಿದ್ದರೆ, ಲೋಕಾಯುಕ್ತ ಕಛೇರಿ ಮತ್ತು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಅಕ್ರಮವಾಗಿ ನಿವೇಶನ ಪಡೆದ ಭಾಸ್ಕರ್ ರಾವ್
ನ್ಯಾಯಾಂಗ ನೌಕರರ ಬಡವಾಣೆಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರು ನಿವೇಶನ ಪಡೆದಿದ್ದಾರೆ ಎಂದು ಆಪ್ ಮುಖಂಡ ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ 5 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದವರಿಗೆ ನ್ಯಾಯಾಂಗ ನೌಕರರ ಬಡಾವಣೆಯಲ್ಲಿ ನಿವೇಶನ ನೀಡಲಾಗುತ್ತದೆ. ಭಾಸ್ಕರ್ ರಾವ್ ಅವರು ಕೇವಲ ಒಂದೂವರೆ ವರ್ಷ ಮಾತ್ರ ಹೈಕೋರ್ಟ್ ಮುಖ್ಯನ್ಯಾಯಾಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಸುಳ್ಳು ದಾಖಲೆಗಳನ್ನು ನೀಡಿ ನ್ಯಾಯಾಂಗ ನೌಕರರ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.